
ಬೆಳಗಾವಿ: ಮಾಟವಾದಿ ಶಿವಾನಂದ ವಾಲಿ ಮಾಟ ಮಂತ್ರ ಮಾಡಿ ಸುಮಾರು ಕೋಟ್ಯಾಂತರ ಆಸ್ತಿಯನ್ನು ಚಿತ್ರ ಸಾಹಿತಿ ಕೆ.ಕಲ್ಯಾಣ ಅವರ ಆಸ್ತಿ ಕಬಳಿಕೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಬೆಳಗಾವಿ ನಗರದ ಕಾನೂನು ಸುವ್ಯವಸ್ಥೆಯ ಡಿಸಿಪಿ ಡಾ.ವಿಕ್ರಮ್ ಆಮಟೆ ತಿಳಿಸಿದರು.
ಅವರು ಸೋಮವಾರ ಮಹಾನಗರದ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸಾಹಿತಿ ಕೆ.ಕಲ್ಯಾಣ ದಾಂಪತ್ಯದ ಪ್ರಕರಣಕ್ಕೆ ಸಂಬಂಸಿದಂತೆ ಮಾಳಮಾರುತಿ ಠಾಣೆಯಲ್ಲಿ ಚಿಟಿಂಗ್ ಮತ್ತು ಅಪಹರಣ ದೂರು ದಾಖಲಿಸಿದ ಪರಿಣಾಮ ಇಲ್ಲಿನ ಪಿಐ ಅವರ ನೇತೃತ್ವದಲ್ಲಿ ತನಿಖೆ ಪ್ರಾರಂಭಿಸಿ ಕಲ್ಯಾಣ ಅವರ ಪತ್ನಿ ಹಾಗೂ ಅವರ ಕುಟುಂಬದವರನ್ನು ರಕ್ಷಿಸಲಾಗಿದೆ ಎಂದರು.
ಮಂತ್ರವಾದಿ ಶಿವಾನಂದ ವಾಲಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ಸಂದರ್ಭದಲ್ಲಿ ಕೆ. ಕಲ್ಯಾಣ ಅವರ ಕುಟುಂಬಕ್ಕೆ ವಂಚಿಸಿದ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಬಾಯಿ ಬಿಟ್ಟಿದ್ದಾರೆ. ಅವರ ಹೇಳಿಕೆಯ ಮೇಲೆ ಮಾಳಮಾರುತಿ ಠಾಣೆಯ ಸಿಪಿಐ ನೇತೃತ್ವದಲ್ಲಿ 9 ಮ್ಯಾಕ್ಸಿಕ್ಯಾಬ್, 350 ಗ್ರಾಂ ಚಿನ್ನ,6 ಕೆ.ಜಿ. ಬೆಳ್ಳಿ, ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಬೆಳಗಾವಿ ನಗರ ಸೇರಿದಂತೆ ಕೋಟ್ಯಾಂತರ ರೂ. ಆಸ್ತಿ ಶಿವಾನಂದ ವಾಲಿ ಅವರ ಹೆಸರಿಗೆ ಬರೆಸಿಕೊಂಡಿದ್ದಾರೆ ಎಂದು ಡಿಸಿಪಿ ಅಮಟೆ ಹೇಳಿದರು.
ಗಂಗಾ ಕುಲಕರ್ಣಿ ಅವರನ್ನು ಮನೆಗೆ ಕಳುಹಿಸಿ ಅವರ ಪತಿಯಿಂದಲೇ ಅವರ ಪತ್ನಿಗೆ ಕಂಟಕ ಇದೆ ಎಂದು ಪೂಜೆ ಮಾಡಿಸುವುದಾಗಿ ಲಕ್ಷಾಂತರ ರೂ. ಹಣ ವಾಲಿ ಅವರ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಅಲ್ಲದೆ ಶಿವಾನಂದ ವಾಲಿ ಅವರ ಮೈ ಮೇಲೆ ದೇವರು ಬರುತ್ತದೆ ಎಂದು ಅವರ ಆಸ್ತಿ ಲಪಟಾಯಿಸಿದ್ದಾರೆ. ಇನ್ನೂ ತನಿಖೆ ಹಂತದಲ್ಲಿದ್ದು ಇನ್ನೆಷ್ಟು ಆಸ್ತಿ ಎಲ್ಲಿ ಎನ್ನುವುದನ್ನು ಪತ್ತೆ ಹಚ್ಚಬೇಕು ಎಂದರು.
ಸಾರ್ವಜನಿಕರು ಇಂಥ ಮಾಟ ಮಂತ್ರ ಎಂದು ಅನುಮಾನ ಬಂದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಡಿಸಿಪಿ ಡಾ.ವಿಕ್ರಮ್ ಆಮಟೆ ತಿಳಿಸಿದರು. ಮಾಳಮಾರುತಿ ಸಿಪಿಐ ಬಿ.ಆರ್.ಗಡ್ಡೇಕರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.