ಬೆಂಗಳೂರು: ಶಾಸಕ ರಾಮಲಿಂಗಾ ರೆಡ್ಡಿ ಹೇಳಿಕೆಯನ್ನು ಸಮರ್ಥಿಸಿಕೊಂಡ ಮಾಜಿ ಸಚಿವ ರೋಷನ್ ಬೇಗ್ ಕಾಂಗ್ರೆಸ್ ನಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ. ರೆಡ್ದಿ ಹೇಳಿಕೆ ನೂರಕ್ಕೆ ನೂರರಷ್ಟು ನಿಜ ಎಂದು ಹೆಳುವ ಮೂಲಕ ಸ್ವಪಕ್ಷದ ನಾಯಕರ ವಿರುದ್ಧವೇ ಮತ್ತೆ ಕಿಡಿಕಾರಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಪಕ್ಷ ದಯನೀಯವಾಗಿ ಸೋಲಲು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ – ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕಾರಣರಾಗಿದ್ದಾರೆ. ಕೋಲಾರದಲ್ಲಿ ಕೆ ಹೆಚ್ ಮುನಿಯಪ್ಪ, ತುಮಕೂರಿನಲ್ಲಿ ದೇವೇಗೌಡರನ್ನು ಹೀನಾಯವಾಗಿ ಸೋತರು. ಹಾಗೇ ಅವರು ಸೋಲಲು ನಮ್ಮ ಪಕ್ಷದ ನಾಯಕರೇ ಕಾರಣ ಎಂದರು.
ಲೋಕಸಭಾ ಚುನಾವಣೆಗೂ ಮುನ್ನ ನಾನೇ ಮುಂದಿನ ಮುಖ್ಯಮಂತ್ರಿ ಎನ್ನುತ್ತಿದ್ದರು ಸಿದ್ದರಾಮಯ್ಯ. ಈಗ ಫಲಿತಾಂಶ ಬಂದ ಮೇಲೆ ಇದೆಲ್ಲ ಇಳಿಯಿತೆ?ಎಂದು ಪ್ರಶ್ನಿಸಿದ ಬೇಗ್, ಸಿದ್ದರಾಮಯ್ಯನವರ ದಾಟಿಯಲ್ಲೇ “ಇಳಿದು ಬಾ, ಇಳಿದು ಬಾ ಸಿದ್ದರಾಮಯ್ಯ” ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಅವರಿಗೆ ನಾನು ಹೇಳಿದ್ದೇ ನಡೆಯಬೇಕು. ಹಾಗೇ ಮಾಡಬೇಕು ಎಂಬ ದುರಂಹಕಾರ. ಎಲ್ಲಾ ಕಡೆಗಳಲ್ಲಿ ಸ್ವೀಪ್ ಮಾಡುತ್ತೇವೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದಿರಿ. ಆಗ ನಮ್ಮ ಮಾತು ಕೇಳಲಿಲ್ಲ ಎಂದು ಗುಡುಗಿದರು.
ಪಕ್ಷದ ನಾಯಕರನ್ನು ಟೀಕಿಸಿದ ಕಾರಣಕ್ಕಾಗಿ ತಮಗೆ ನೀಡಿರುವ ನೋಟೀಸ್ ಗೆ ಯಾವುದೇ ಕಾರಣಕ್ಕೂ ಉತ್ತರ ನೀಡುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಸಿದ್ದರಾಮಯ್ಯ ಅವರೇ ಮೂಲ ಕಾರಣ. ಮಂಡ್ಯದಲ್ಲಿ ಮೈತ್ರಿ ಪಕ್ಷದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ ಸ್ವಾಮಿ ಅವರನ್ನು ಸೋಲಿಸಲು ಸಂಚು ರೂಪಿಸಿ ಅದನ್ನು ಕಾರ್ಯಗತಗೊಳಿಸಿದ್ದಾರೆ. ತುಮಕೂರಿನಲ್ಲಿ ದೇವೇಗೌಡರ ಸೋಲಿಗೂ ನಮ್ಮವರೇ ಕಾರಣರಾಗಿದ್ದಾರೆ. ಇದೇ ರೀತಿ ಹಲವು ಕ್ಷೇತ್ರಗಳಲ್ಲಿ ಪಕ್ಷ ಸೋಲಲು ಅವರ ಕೊಡುಗೆ ಇದೆ. ಹೀಗಾಗಿ ಮೊದಲು ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿಮಾಡಬೇಕು ಎಂದು ಹೇಳಿದರು.
ನೋಟಿಸ್ ಕೊಡುವುದಾದರೆ ಕೋಲಾರದಲ್ಲಿ ಮುನಿಯಪ್ಪ ಅವರ ಸೋಲಿಗೆ ಕಾರಣರಾದವರಿಗೆ ಕೊಡಲಿ, ದೇವೇಗೌಡರನ್ನು ಸೋಲಿಸಿದ್ದು ನಮ್ಮ ಪಕ್ಷದವರೇ.
ಅವರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ, ಮಂಡ್ಯದಲ್ಲಿ ನಿಖಿಲ್ ವಿರುದ್ಧ ಬಹಿರಂಗವಾಗಿಯೇ ನಮ್ಮ ಪಕ್ಷದವರು ಕೆಲಸ ಮಾಡಿದರು. ಹೀಗಿದ್ದೂ ಏಕೆ ನೋಟಿಸ್ ನೀಡಿಲ್ಲ, ಇದೆಲ್ಲಾ ಕಣ್ಣ ಮುಂದಿದ್ದರೂ ಸತ್ಯ ಶೋಧನಾ ಸಮಿತಿ ರಚಿಸಲಾಗಿದೆ. ಇದನ್ನು ನೋಡಿ ನೋಡಿ ತಮಗೆ ನಗು ಬರುತ್ತಿದೆ ಎಂದರು.
ಪಕ್ಷ ಮತ್ತು ಸರ್ಕಾರದಲ್ಲಿ ಸೂಕ್ತ ಹೊಂದಾಣಿಕೆ ಇಲ್ಲ. ಹೊಂದಾಣಿಕೆ ಮಾಡಲು ಕಾರ್ಯತಂತ್ರ ರೂಪಿಸಿಲ್ಲ. ಇದನ್ನು ಮಾಡಬೇಕಾದ ದಿನೇಶ್ ಗುಂಡೂರಾವ್ ಅವರಿಗೆ ಪ್ರಬುದ್ಧತೆ ಇಲ್ಲ, ಇವರು ವಿಫಲ ನಾಯಕ. ಇಂತಹ ನಾಯಕರು ರಾಹುಲ್ ಗಾಂಧಿ ಅವರನ್ನೇ ದಾರಿ ತಪ್ಪಿಸಿದ್ದಾರೆ. ಹೀಗಾಗಿ ನಾನು ವೈಯಕ್ತಿಕವಾಗಿ ರಾಹುಲ್ ಗಾಂಧಿ ಅವರಲ್ಲಿ ಕ್ಷಮೆ ಕೋರುತ್ತೇನೆ ಎಂದರು.
Congress,Roshan baig,Siddaramaiah