ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಷಯದಲ್ಲಿ ಕಾಂಗ್ರೆಸ್ ಗೆ ವಿರೋಧವಿಲ್ಲ : ರಾಜ್‌ ಬಬ್ಬರ್‌

ಇಂದೋರ್: ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್‌ ಎಂದೂ ವಿರೋಧ ವ್ಯಕ್ತಪಡಿಸಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಜ್‌ ಬಬ್ಬರ್‌ ಹೇಳಿದ್ದಾರೆ.

ಮಧ್ಯಪ್ರದೇಶ ಚುನಾವಣಾ ಪ್ರಚಾರ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಲ್ಲರೂ ರಾಮ ಮಂದಿರದ ನಿರ್ಮಾಣವನ್ನು ಬಯಸುತ್ತಾರೆ. ಮಂದಿರವನ್ನು ನಿರ್ಮಿಸಬೇಕೆಂದು ಮುಸ್ಲಿಮರು ಬಯಸುತ್ತಿದ್ದಾರೆಂದು ನಾನು ಭಾವಿಸುತ್ತೇನೆ. ಆದರೆ, ಸುಪ್ರೀಂಕೋರ್ಟ್‌ನಲ್ಲಿ ಈ ಪ್ರಕರಣ ಇನ್ನೂ ಬಾಕಿ ಇರುವುದರಿಂದ ನ್ಯಾಯಾಲಯ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಆದರೆ, ಬಿಜೆಪಿ ಪ್ರತಿ ಚುನಾವಣೆಯಲ್ಲಿ ರಾಮ ಮಂದಿರ ವಿಷಯನ್ನು ಮುನ್ನೆಲೆಗೆ ತರುತ್ತದೆ ಎಂದು ಗುಡುಗಿದರು. ಬಿಜೆಪಿ ರಾಮನ ಕುರಿತಾಗಿ ಎಂದಿಗೂ ವಿಶೇಷವಾದ ಭಾವನೆಗಳನ್ನು ಹೊಂದಿಲ್ಲ. ಚುನಾವಣೆ ಬಂದಾಗ ಮಾತ್ರ ರಾಮನ ಹೆಸರಿನಲ್ಲಿ ಮತ ಕೇಳಲು ಆರಂಭಿಸುತ್ತದೆ ಎಂದು ಟೀಕಿಸಿದ್ದಾರೆ.

ರಾಮ ಮಂದಿರ ವಿಷಯದಲ್ಲಿ ಬಿಜೆಪಿ ಮತದಾರರನ್ನು ಮೋಸಗೊಳಿಸುತ್ತಿದೆ ಎಂದು ಜನರು ತಿಳಿದುಕೊಳ್ಳಲು ಪ್ರಾರಂಭಿಸಿದ್ದಾರೆ. ದೇವಾಲಯ ನಿರ್ಮಾಣದ ಭರವಸೆ ನೀಡಿದ್ದಾರಾದರೂ ಈವರೆಗೆ ದಿನಾಂಕವನ್ನು ಹೇಳಿಲ್ಲ ಎಂದು ಹೇಳಿದರು.

ಈ ನಡುವೆ ಚುನಾವಣಾ ಪ್ರಚಾರ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ಹೆಸರನ್ನು ರುಪಾಯಿ ಮೌಲ್ಯಕ್ಕೆ ಹೋಲಿಸಿ, ರಾಜ್‌ ಬಬ್ಬರ್‌ ನೀಡಿರುವ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಈ ಹಿಂದೆ ಪ್ರಧಾನಿ ಮೋದಿ ಅವರು ರೂಪಾಯಿ ಮೌಲ್ಯ ಕುಸಿದು ಮನಮೋಹನ್‌ ಸಿಂಗ್‌ ವಯಸ್ಸಿನ ಸನಿಹಕ್ಕೆ ತಲುಪಿದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಲು ಮುಂದಾದ ರಾಜ್ ಬಬ್ಬರ್, ಇಂದು ತಮ್ಮ ಪ್ರೀತಿಯ ತಾಯಿಯ ವಯಸ್ಸಿಗೆ ರೂಪಾಯಿ ಮೌಲ್ಯ ಸನಿಹವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

Ayodhya,Ram Mandir,Raj babbar,Congress

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ