ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ರಾಜೀನಾಮೆ

ಬೆಂಗಳೂರು, ಜೂ.4-ಲೋಕಸಭೆ ಚುನಾವಣೆಯಲ್ಲಿನ ಸೋಲಿನ ನೈತಿಕ ಹೊಣೆ ಹೊತ್ತು ಶಾಸಕ ಎಚ್.ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸೋಲು ತಮಗೆ ತೀವ್ರ ನೋವುಂಟು ಮಾಡಿದೆ. ರಾಜ್ಯಾಧ್ಯಕ್ಷನಾಗಿ ಇದರ ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದರು.

ದೇವೇಗೌಡರು ಊರಿನಲ್ಲಿ ಇಲ್ಲ. ಪಕ್ಷದ ವತಿಯಿಂದ ನನಗೆ ಒಂದು ಕಾರು ನೀಡಲಾಗಿದೆ. ಅದೇ ಕಾರಿನಲ್ಲಿ ದೇವೇಗೌಡರ ಮನೆಗೆ ಹೋಗಿ ದೇವೇಗೌಡರ ಟೇಬಲ್ ಮೇಲೆ ರಾಜೀನಾಮೆ ಪತ್ರ ಇಟ್ಟು ಬರುತ್ತೇನೆ. ರಾಜಕಾರಣದಲ್ಲಿ ಯಾರಿಗೆ ಬೇಕಾದರೂ ನಾನು ಪ್ರತ್ಯುತ್ತರ ನೀಡಬಲ್ಲೆ, ಆದರೆ ದೇವೇಗೌಡರಿಗೆ ನೀಡಲು ಸಾಧ್ಯವಿಲ್ಲ. ಹೀಗಾಗಿ ನಾನು ಅವರ ಟೇಬಲ್ ಮೇಲೆ ರಾಜೀನಾಮೆ ಪತ್ರ ಇಟ್ಟು ಬರುತ್ತೇನೆ ಎಂದು ತಿಳಿಸಿದರು.

ಕಾಂಗ್ರೆಸ್‍ನಲ್ಲಿ ನನಗೆ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಹೊರಬಂದ ನಾನು ಜೆಡಿಎಸ್ ಸೇರಿದೆ.ನನ್ನ ಅಭಿಲಾಷೆಯಂತೆ ಹುಣಸೂರು ಕ್ಷೇತ್ರದಿಂದ ಟಿಕೆಟ್ ನೀಡಿ ದೇವೇಗೌಡರು ರಾಜಕೀಯ ಪುನರ್ಜನ್ಮಕ್ಕೆ ಆಶೀರ್ವದಿಸಿದ್ದರು. ಅದಕ್ಕಾಗಿ ಕೃತಜ್ಞನಾಗಿದ್ದೇನೆ. ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಮೈಸೂರಿನಲ್ಲಿ ಜೆಡಿಎಸ್ ಅಭ್ಯರ್ಥಿಯ ಸ್ಪರ್ಧೆಗೆ ಅವಕಾಶ ನೀಡಲಿಲ್ಲ. ತುಮಕೂರಿನಲ್ಲಿ ಹಿರಿಯರಾದ ದೇವೇಗೌಡರನ್ನು ರಾಜಕೀಯ ಹುನ್ನಾರ ಮಾಡಿ ಖೆಡ್ಡಕ್ಕೆ ಕೆಡವಲಾಯಿತು.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್‍ನ ಕೆಲವು ನಾಯಕರ ಬೇಜವಾಬ್ದಾರಿ ಹೇಳಿಕೆಗಳಿಂದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲುವಂತಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ಸಮನ್ವಯತೆಗೆ ರಚಿಸಲಾಗಿರುವ ಸಮಿತಿ ಸಿದ್ದರಾಮಯ್ಯ ಅವರ ಕೈಗೊಂಬೆಯಾಗಿದೆ. ಈವರೆಗೂ ಕನಿಷ್ಠ ಕಾರ್ಯಕ್ರಮ ರೂಪಿಸಲು ಸಾಧ್ಯವಾಗಿಲ್ಲ.

ಸರ್ಕಾರ ಮುಕ್ತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಸ್ಥಿತಿ ಇದೆ. ಸೌಹಾರ್ದತೆ ಇಲ್ಲ. ನನ್ನನ್ನು ಸಮನ್ವಯ ಸಮಿತಿಗೆ ಸದಸ್ಯರನ್ನಾಗಿ ಮಾಡಲಿಲ್ಲ. ಎರಡೂ ಪಕ್ಷಗಳ ರಾಜ್ಯಾಧ್ಯಕ್ಷರಿಗೆ ಸಮಿತಿಯಲ್ಲಿ ಅವಕಾಶವೇ ಇಲ್ಲ ಎಂದು ವಿಶ್ವನಾಥ್ ಆಕ್ರೋಶ ಹೊರಹಾಕಿದರು.

ಪ್ರಾದೇಶಿಕ ಪಕ್ಷಗಳ ಅಗತ್ಯ ಈಗಿನ ರಾಜಕೀಯ ಸ್ಥಿತಿಯಲ್ಲಿ ಹೆಚ್ಚಿದೆ. ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡಲು ಮುಂದಾದಾಗ ಪ್ರಾದೇಶಿಕ ಪಕ್ಷಗಳ ವಿರೋಧದಿಂದ ಅದನ್ನು ಹಿಂಪಡೆಯುವ ಸ್ಥಿತಿ ನಿರ್ಮಾಣವಾಯಿತು. ಕರ್ನಾಟಕದಲ್ಲಿ ಜೆಡಿಎಸ್‍ನ ಉಳಿವು ಅನಿವಾರ್ಯವಾಗಿದೆ. ದೇವೇಗೌಡರು ಕಷ್ಟಪಟ್ಟು ಪಕ್ಷ ಕಟ್ಟಿದ್ದಾರೆ ಎಂದು ಹೇಳಿದರು.

ಮಂತ್ರಿಗಿರಿಗೆ ಆಸೆ ಬಿದ್ದು ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿಲ್ಲ. ಈಗಾಗಲೇ ಮಂತ್ರಿಗಿರಿ ನೋಡಿದ್ದೇನೆ. ಅವಸರ ಇರುವವರಿಗೆ ಮಂತ್ರಿಗಿರಿ ಕೊಡಲಿ. ಒಂದು ವೇಳೆ ಮಂತ್ರಿಗಿರಿ ಕೊಟ್ಟರೆ ಯಾರೂ ಬೇಡ ಎನ್ನುವುದಿಲ್ಲ. ನಾನು ಅದನ್ನು ನಿಭಾಯಿಸುತ್ತೇನೆ ಎಂದು ಹೇಳಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿರುವ ಬಿಜೆಪಿಗೆ ಹೋಗಲು ನಾನು ತಯಾರಿಲ್ಲ. ಶ್ರೀನಿವಾಸ್‍ಪ್ರಸಾದ್ ಬಿಜೆಪಿಯಲ್ಲಿರಬಹುದು, ನಾನು ಜೆಡಿಎಸ್‍ನಲ್ಲಿದ್ದರೂ ನಾವಿಬ್ಬರು ಒಳ್ಳೆಯ ಸ್ನೇಹಿತರು. ಪಕ್ಷ ಮತ್ತು ರಾಜಕಾರಣ ನಮ್ಮ ಸ್ನೇಹಕ್ಕೆ ಅಡ್ಡಿ ಬಂದಿಲ್ಲ ಎಂದು ಹೇಳಿದರು.

ಪ್ರಭುತ್ವ ಮತ್ತು ಪಕ್ಷ ಜೋಡೆತ್ತುಗಳಂತಿರಬೇಕು. ಆದರೆ ಅದು ಈಗ ಸಾಧ್ಯವಾಗುತ್ತಿಲ್ಲ. ಸಚಿವರು ಪಕ್ಷ ಸಂಘಟನೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಜೆಡಿಎಸ್‍ಗೆ ಒಳ್ಳೆಯದಾಗಲಿ. ಜನಮಾನಸದಲ್ಲಿ ಪ್ರೀತಿ ಗಳಿಸಿ ನಳನಳಿಸಲಿ ಎಂದು ಅವರು ಹಾರೈಸಿದರಲ್ಲದೆ, ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಚಲ ನಿರ್ಧಾರ. ಇದರಲ್ಲಿ ಬದಲಾವಣೆ ಮಾಡುವುದಿಲ್ಲ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ನಾನು ರಾಜೀನಾಮೆ ನೀಡಲು ಹೋಗಿದ್ದೆ. ಆದರೆ ಸ್ವಲ್ಪ ದಿನ ಕಾಯುವಂತೆ ದೇವೇಗೌಡರು ಹೇಳಿದ್ದರು. ಹೀಗಾಗಿ 10-12 ದಿನ ತಡವಾಯಿತು. ಬಹಿರಂಗವಾಗಿ ಹೇಳಿಯೇ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ವಿಶ್ವನಾಥ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ