ಕಾಂಗ್ರೆಸ್ ಉಸ್ತುವಾರಿ ಬದಲಿಸಿ- ಖರ್ಗೆ, ಸಿದ್ದರಾಮಯ್ಯ ನಡುವೆ ಜಟಾಪಟಿ!

ಬೆಂಗಳೂರು: ಲೋಕಸಮರದಲ್ಲಿ ಸೋಲಿನ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಜಟಾಪಟಿ ಆರಂಭವಾಗಿದೆ.

ಹೌದು. ಹಾಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರನ್ನ ಬದಲಿಸುವ ಬಗ್ಗೆಯೇ ಇವರಿಬ್ಬರ ವಿವಾದದ ಮೂಲವಾಗಿದೆ. ವೇಣುಗೋಪಾಲ್ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿಯ ನಂತರ ಕಳೆದ ವಿಧಾನಸಭೆ ಹಾಗೂ ಈ ಬಾರಿಯ ಲೋಕಸಭಾ ಚುನಾವಣೆ ಎರಡರಲ್ಲೂ ಪಕ್ಷ ಸೋತಿದೆ.

ವೇಣುಗೋಪಾಲ್, ಸಿದ್ದರಾಮಯ್ಯ ಆ್ಯಂಡ್ ಟೀಮ್ ಜೊತೆ ಅಡ್ಜೆಸ್ಟ್ ಮೆಂಟ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಹುತೇಕ ಹಿರಿಯ ನಾಯಕರ ಈ ಅಭಿಪ್ರಾಯದಂತೆ ವೇಣುಗೋಪಾಲ್ ರನ್ನ ಬದಲಿಸಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಳಿ ಪಟ್ಟು ಹಿಡಿದಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಸಿದ್ದರಾಮಯ್ಯ ಯಾವ ಕಾರಣಕ್ಕೂ ವೇಣುಗೋಪಾಲ್ ಬದಲಾವಣೆ ಬೇಡ ಎಂದು ಕೌಂಟರ್ ಕೊಟ್ಟಿದ್ದಾರೆ. ಪಕ್ಷ ಸಂಕಷ್ಟದಲ್ಲಿದೆ. ವೇಣುಗೋಪಾಲ್ ಗೆ ರಾಜ್ಯ ರಾಜಕಾರಣದ ಸಮಗ್ರ ಮಾಹಿತಿ ಇದ್ದು, ಈ ಸಂಕಷ್ಟದ ಸಂದರ್ಭದಲ್ಲಿ ಅವರ ಬದಲಾವಣೆ ಬೇಡ ಎಂದು ಸಿದ್ದರಾಮಯ್ಯ ವಾದಿಸಿದ್ದಾರೆ. ಆದರೆ ರಾಜ್ಯದಲ್ಲಿ ಪಕ್ಷದ ಈ ಸಂಕಷ್ಟದ ಸ್ಥಿತಿಗೆ ವೇಣುಗೋಪಾಲ್ ಹೊಂದಾಣಿಕೆ ರಾಜಕಾರಣವೇ ಕಾರಣ ಎಂಬುದು ಖರ್ಗೆಯವರ ವಾದವಾಗಿದೆ ಎನ್ನಲಾಗಿದೆ.

ವೇಣುಗೋಪಾಲ್ ಮಾತು ನಂಬಿ ಕಳೆದ 4 ವರ್ಷದಲ್ಲಿ ಹೈಕಮಾಂಡ್ ಸಿದ್ದರಾಮಯ್ಯ ಮಾತಿಗೆ ಮಣೆ ಹಾಕಿದೆ. ಅದರ ಪರಿಣಾಮ 128 ಸ್ಥಾನದಲ್ಲಿದ್ದ ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ 80 ಸ್ಥಾನಕ್ಕೆ ಕುಸಿಯಿತು. 10 ಸಂಸದರಿದ್ದ ಪಕ್ಷದಲ್ಲಿ ಈಗ ಒಬ್ಬನೇ ಸಂಸದ ಅನ್ನೋ ಸ್ಥಿತಿ ಎದುರಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಮಾತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಒಂದು ಹಂತದಲ್ಲಿ ನಿಜ ಎನ್ನಿಸಿದೆ. ಆದರೆ ಕಳೆದ 6 ವರ್ಷದಿಂದ ಸಿದ್ದರಾಮಯ್ಯರನ್ನೇ ನಂಬಿದ್ದ ರಾಹುಲ್ ಗಾಂಧಿ ಈಗ ಗೊಂದಲಕ್ಕೀಡಾಗಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ಗುಲಾಂ ನಬಿ ಆಜಾದ್ ಅಥವಾ ಚಲ್ಲಕುಮಾರ್ ಯಾರನ್ನಾದರೂ ನೇಮಿಸಿ ಎಂಬ ಸಲಹೆಯನ್ನು ಕೂಡ ಮಲ್ಲಿಕಾರ್ಜುನ ಖರ್ಗೆ ಅವರು ಹೈಕಮಾಂಡ್‍ಗೆ ಮನವಿ ಮಾಡಿದ್ದಾರೆ. ಈ ಕುರಿತು ಶೀಘ್ರವಾಗಿ ಸೂಕ್ತವಾದ ತೀರ್ಮಾನ ಕೈಗೊಳ್ಳುವ ಭರವಸೆಯನ್ನು ಹೈಕಮಾಂಡ್ ಕೂಡ ನೀಡಿದೆ ಎಂದು ಹೇಳಲಾಗುತ್ತಿದೆ.

ಆದರೆ ಕುತೂಹಲ ಸಂಗತಿಯೆಂದರೆ ಉಸ್ತುವಾರಿ ಬದಲಾವಣೆ ಮೂಲಕ ರಾಜ್ಯ ರಾಜಕಾರಣದ ಮೇಲೆ ಹಾಗೂ ಪಕ್ಷದಲ್ಲಿ ಹಿಡಿತ ಸಾಧಿಸಲು ಮಲ್ಲಿಕಾರ್ಜುನ ಖರ್ಗೆ ಯತ್ನಿಸುತ್ತಿದ್ದಾರೆ ಅನ್ನೋದು ಸಿದ್ದರಾಮಯ್ಯನವರ ಆತಂಕವಾಗಿದೆ. ಇನ್ನೊಂದೆಡೆ ವೇಣುಗೋಪಾಲ್ ಇರಲಿ ಎನ್ನುವ ಮೂಲಕ ಸಿದ್ದರಾಮಯ್ಯ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಅನ್ನೋ ಅನುಮಾನ ಮಲ್ಲಿಕಾರ್ಜುನ ಖರ್ಗೆಯವರಲ್ಲಿ ಮೂಡಿರುವುದಾಗಿ ಅವರ ಆಪ್ತ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ