ರಾಹುಲ್ ಗಾಂಧಿ-ಚಂದ್ರಬಾಬು ನಾಯ್ಡು ಭೇಟಿ: ಮೈತ್ರಿಕೂಟ ರಚನೆ ಕುರಿತು ಚರ್ಚೆ

ನವದೆಹಲಿ: ಲೋಕಸಭಾ ಚುನಾವಣಾ ಕದನ ಕೊನೆ ಹಂತ ತಲುಪಿರುವ ನಡುವೆ ಆಂಧ್ರ ಪ್ರದೇಶ ಸಿಎಂ ಮತ್ತು ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರನ್ನು ಭೇಟಿ ಮಾಡಿ ಮೈತ್ರಿಕೂಟ ರಚನೆ ಕುರಿತು ಚರ್ಚೆ ನಡೆಸಿದ್ದಾರೆ.

ಲೋಕಸಭೆ ಚುನಾವಣೆ ಮತ ಎಣಿಕೆಗೆ ದಿನಗಣನೆ ಆರಂಭವಾಗಿರುವಂತೆಯೇ ರಾಷ್ಟ್ರ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಕೇಂದ್ರದಲ್ಲಿ ಸರ್ಕಾರ ರಚನೆ ಕಸರತ್ತು ಆರಂಭಗೊಂಡಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಈಗಾಗಲೇ ಕಾಂಗ್ರೆಸ್​ನೊಂದಿಗೆ ಗುರುತಿಸಿಕೊಂಡಿರುವ ಪಕ್ಷಗಳ ಮುಖಂಡರೊಂದಿಗೆ ಒಂದು ಹಂತದ ಚರ್ಚೆ ನಡೆಸಿದ್ದಾರೆ.

ಇದರ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಬಿಜೆಪಿ ವಿರೋಧಿ ಮೈತ್ರಿಕೂಟ ರಚನೆಗೆ ಮುಂದಾಗಿದ್ದಾರೆ. ಈ ಸಂಬಂಧ ಅವರು ಕಾಂಗ್ರೆಸ್​ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಅದರ ಭಾಗವಾಗಿ ಶನಿವಾರ ಅವರು ದೆಹಲಿಯ ರಾಹುಲ್​ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಿದರು.

ಮಧ್ಯಾಹ್ನ ಅವರು ಉತ್ತರ ಪ್ರದೇಶದ ಲಖನೌಗೆ ತೆರಳುತ್ತಿದ್ದು, ಬಿಎಸ್​ಪಿ ಅಧ್ಯಕ್ಷೆ ಮಾಯಾವತಿ ಮತ್ತು ಎಸ್​ಪಿ ಅಧ್ಯಕ್ಷ ಅಖಿಲೇಶ್​ ಯಾದವ್​ ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಶುಕ್ರವಾರ ಚಂದ್ರಬಾಬು ನಾಯ್ಡು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಮತ್ತು ಆಮ್​ ಅದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್​ ಕೇಜ್ರಿವಾಲ್​ ಅವರನ್ನು ಭೇಟಿ ಮಾಡಿ ಮೈತ್ರಿಕೂಟ ರಚನೆ ಕುರಿತು ಮಾತುಕತೆ ನಡೆಸಿದ್ದರು.

ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್​ಎಸ್​) ಸೇರಿದಂತೆ ಬಿಜೆಪಿ ವಿರುದ್ಧ ಇರುವ ಎಲ್ಲಾ ಪಕ್ಷಗಳಿಗೂ ಮಹಾಘಟಬಂಧನ್​ಗೆ ಸ್ವಾಗತ ಕೋರಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಒಡಿಶಾದ ಸಿಎಂ ನವೀನ್​ ಪಟ್ನಾಯಕ್​ ಒಡಿಶಾಗೆ ವಿಶೇಷ ಸ್ಥಾನಮಾನ ನೀಡಲು ಸಮ್ಮತಿಸುವ ಯಾವುದೇ ಮೈತ್ರಿಕೂಟಕ್ಕೆ ಬೆಂಬಲ ನೀಡಲು ಸಿದ್ಧ ಎಂದು ತಿಳಿಸಿದ್ದರು.

lok sabha election,rahul gandhi,chandrababu naidu

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ