ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ನೂರುಬಾರಿ ಬಂದರೂ ಏನೂ ಮಾಡಲಾಗದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು:ಮಾ-25: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ನೂರು ಬಾರಿ ಬಂದರೂ ಏನೂ ಮಾಡಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಕಳಂಕಿತರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದರೆ, ಜನಕ್ಕೆ ಅರ್ಥವಾಗುವುದಿಲ್ಲವೇ. ಜನ ಎಲ್ಲವನ್ನು ನೋಡುತ್ತಿದ್ದು, ಸುಳ್ಳಿನಿಂದ ಗೆಲ್ಲಲ್ಲು ಸಾಧ್ಯವಿಲ್ಲವೆಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಅಮಿತ್ ಶಾ ಹಾಗೂ ಮೋದಿ ಒಂದು ಬಾರಿ ಅಲ್ಲ ನೂರು ಬಾರಿ ಬಂದ್ರೂ ಏನು ಮಾಡಲು ಸಾಧ್ಯವಿಲ್ಲ. ಕಳಂಕಿತರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕರೆಯುತ್ತಿರುವಾಗ, ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿರುವ ನಮಗೆ ಜನ ಬೆಂಬಲವಿದೆ ಎಂದರು.

ರಾಹುಲ್ ಗಾಂಧಿ ಪ್ರವಾಸಕ್ಕೆ ಉತ್ತಮ‌ ಪ್ರತಿಕ್ರಿಯೆ ಸಿಕ್ಕಿದೆ. ಕರಾವಳಿಯನ್ನು ಕೋಮುವಾದದ ಕೇಂದ್ರ ಮಾಡಲು ಹೊರಟಿದ್ದವರು ಬಿಜೆಪಿ ಮಂದಿ. ಕೋಮುವಾದಿಗಳ ಆಟ ರಾಜ್ಯದಲ್ಲಿ ನಡೆಯುವುದಿಲ್ಲ. ಅಲ್ಲಿಯೂ ನಮ್ಮ ಜನಾಶೀರ್ವಾದ ಯಾತ್ರೆ ಯಶಸ್ವಿಯಾಗಿದೆ. ಅಥಣಿಯಿಂದ ಹಿಡಿದು ಚಾಮರಾಜನಗರ, ಮಂಡ್ಯವರೆಗೆ ಎಲ್ಲ ಕಡೆಯೂ ನಮಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ನಾವು ಅಧಿಕಾರಕ್ಕೆ ಬಂದ ದಿನದಿಂದಲೂ ಜನ ನಮ್ಮ ಪರವಾಗಿದ್ದಾರೆ. ಗುಪ್ತಚರ ಮಾಹಿತಿಯೂ ಅದನ್ನೇ ಹೇಳಿವೆ. ಇದರಲ್ಲಿ ವಿಶೇಷ ಏನಿದೆ. ಜನ ಕೆಲಸ ಮಾಡುವವರಿಗೆ ಬೆಂಬಲ ನೀಡುತ್ತಾರೆ ಎಂದು ತಿಳಿಸಿದರು.

ಇದೇವೇಳೆ ಜೆಡಿಎಸ್ ಬಂಡಾಯ ಶಾಸಕರು ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಲಿದ್ದಾರೆ. ಇದರಿಂದಾಗಿ ಸಹಜವಾಗಿಯೇ ಪಕ್ಷದ ಬಲ ಹೆಚ್ಚಲಿದೆ. ಇದರೊಂದಿಗೆ ಅತ್ಯುತ್ತಮ ಸಂಸದೀಯ ಪಟು ಎಂ.ಸಿ.ನಾಣಯ್ಯ ಅವರೂ ಪಕ್ಷಕ್ಕೆ ಸೇರಲಿದ್ದಾರೆ ಎಂದರು.

mysore,cm siddaramaiah,rahul gandhi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ