ನವದೆಹಲಿ: ಲೋಕಸಭಾ ಚುನಾವಣಾ ಕದನ ಕೊನೆ ಹಂತ ತಲುಪಿರುವ ನಡುವೆ ಆಂಧ್ರ ಪ್ರದೇಶ ಸಿಎಂ ಮತ್ತು ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮೈತ್ರಿಕೂಟ ರಚನೆ ಕುರಿತು ಚರ್ಚೆ ನಡೆಸಿದ್ದಾರೆ.
ಲೋಕಸಭೆ ಚುನಾವಣೆ ಮತ ಎಣಿಕೆಗೆ ದಿನಗಣನೆ ಆರಂಭವಾಗಿರುವಂತೆಯೇ ರಾಷ್ಟ್ರ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಕೇಂದ್ರದಲ್ಲಿ ಸರ್ಕಾರ ರಚನೆ ಕಸರತ್ತು ಆರಂಭಗೊಂಡಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಈಗಾಗಲೇ ಕಾಂಗ್ರೆಸ್ನೊಂದಿಗೆ ಗುರುತಿಸಿಕೊಂಡಿರುವ ಪಕ್ಷಗಳ ಮುಖಂಡರೊಂದಿಗೆ ಒಂದು ಹಂತದ ಚರ್ಚೆ ನಡೆಸಿದ್ದಾರೆ.
ಇದರ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಬಿಜೆಪಿ ವಿರೋಧಿ ಮೈತ್ರಿಕೂಟ ರಚನೆಗೆ ಮುಂದಾಗಿದ್ದಾರೆ. ಈ ಸಂಬಂಧ ಅವರು ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಅದರ ಭಾಗವಾಗಿ ಶನಿವಾರ ಅವರು ದೆಹಲಿಯ ರಾಹುಲ್ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಿದರು.
ಮಧ್ಯಾಹ್ನ ಅವರು ಉತ್ತರ ಪ್ರದೇಶದ ಲಖನೌಗೆ ತೆರಳುತ್ತಿದ್ದು, ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಮತ್ತು ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಶುಕ್ರವಾರ ಚಂದ್ರಬಾಬು ನಾಯ್ಡು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಮತ್ತು ಆಮ್ ಅದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಮೈತ್ರಿಕೂಟ ರಚನೆ ಕುರಿತು ಮಾತುಕತೆ ನಡೆಸಿದ್ದರು.
ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ಎಸ್) ಸೇರಿದಂತೆ ಬಿಜೆಪಿ ವಿರುದ್ಧ ಇರುವ ಎಲ್ಲಾ ಪಕ್ಷಗಳಿಗೂ ಮಹಾಘಟಬಂಧನ್ಗೆ ಸ್ವಾಗತ ಕೋರಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಒಡಿಶಾದ ಸಿಎಂ ನವೀನ್ ಪಟ್ನಾಯಕ್ ಒಡಿಶಾಗೆ ವಿಶೇಷ ಸ್ಥಾನಮಾನ ನೀಡಲು ಸಮ್ಮತಿಸುವ ಯಾವುದೇ ಮೈತ್ರಿಕೂಟಕ್ಕೆ ಬೆಂಬಲ ನೀಡಲು ಸಿದ್ಧ ಎಂದು ತಿಳಿಸಿದ್ದರು.
lok sabha election,rahul gandhi,chandrababu naidu