ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಟಿಡಿಪಿ ಮುಖ್ಯಸ್ಥ, ಸಿಎಂ ಚಂದ್ರಬಾಬು ನಾಯ್ಡು ಪತ್ರ

ಅಮರಾವತಿ: ಮಾ-17: ನಮ್ಮ ನಿರೀಕ್ಷೆಗಳನ್ನು ಹುಸಿಗೊಳಿಸಿ, ಭರವಸೆ ಈಡೇರಿಸದ ಹಿನ್ನಲೆಯಲ್ಲಿ ಎನ್ ಡಿ ಎ ಮೈತ್ರಿ ಕೂಟದಿಂದ ಹೊರಬಂದಿರುವುದಾಗಿ ಟಿಡಿಪಿ ಮುಖ್ಯಸ್ಥ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ಎನ್ ಡಿಎ ಮೈತ್ರಿಕೂಟದಿಂದ ಹೊರಬಂದ ನಂತರ ಆಂಧ್ರ ಪ್ರದೇಶ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ತಮ್ಮ ನಿರೀಕ್ಷೆಗಳನ್ನು ಕೇಂದ್ರ ಈಡೇರಿಸಿಲ್ಲ ಎಂದು ಹೇಳಿದ್ದಾರೆ. ಆಂಧ್ರ ಪ್ರದೇಶ ವಿಭಜನೆ ಸಂದರ್ಭದಲ್ಲಿ ಸಂಯುಕ್ತ ಪ್ರಗತಿಪರ ಒಕ್ಕೂಟ(ಯುಪಿಎ)ಯಿಂದ ಆದ ಅನ್ಯಾಯದಿಂದ ಆಂಧ್ರ ಪ್ರದೇಶದ ಜನರಿಗೆ ನ್ಯಾಯ ದೊರಕಬಹುದೆಂಬ ನಿರೀಕ್ಷೆಯಿಂದ ಟಿಡಿಪಿ ಎನ್ ಡಿಎ ಮೈತ್ರಿಕೂಟವನ್ನು ಸೇರಿತ್ತು. ಆದರೆ ಮೈತ್ರಿಯಲ್ಲಿ ಮುಂದುವರಿಯುವುದರಲ್ಲಿ ಯಾವುದೇ ಅರ್ಥ ಮತ್ತು ಉದ್ದೇಶ ಈಡೇರುವುದಿಲ್ಲ ಎಂದು ಗೊತ್ತಾದ ಮೇಲೆ ಹೊರಬರಲು ನಿರ್ಧರಿಸಿತು ಎಂದು ಹೇಳಿದ್ದಾರೆ.

ಆಂಧ್ರ ಪ್ರದೇಶ ಜನತೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಚಂದ್ರಬಾಬು ನಾಯ್ಡು ಗುಡುಗಿದ್ದಾರೆ.

ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ, ಆಂಧ್ರಪ್ರದೇಶ ಪುನರ್ರಚನೆ ಕಾಯ್ದೆ 2014ನ್ನು ಜಾರಿಗೆ ತರುವ ಇಚ್ಛೆಯನ್ನು ಹೊಂದಿಲ್ಲ. ರಾಜ್ಯಸಭೆಯಲ್ಲಿ ಪಕ್ಷ ನೀಡಿರುವ ವಿಶೇಷ ಸ್ಥಾನಮಾನದ ಭರವಸೆಯನ್ನು ಕೂಡ ಈಡೇರಿಸಿಲ್ಲ. ಪುನರ್ರಚನೆ ಕಾಯ್ದೆಯಲ್ಲಿ ನಮೂದಿಸಿರುವ ಸಂವಿಧಾನಿಕ ಜವಾಬ್ದಾರಿಗಳನ್ನು ಜಾರಿಗೆ ತರುವಲ್ಲಿ ಕೂಡ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಬಿಜೆಪಿ ಮತ್ತು ಟಿಡಿಪಿಗಳು ಒಟ್ಟಾಗಿ 2014ರ ಸಂಸತ್ತು ಚುನಾವಣೆಯನ್ನು ಎದುರಿಸಿದವು. ಆಂಧ್ರ ಪ್ರದೇಶ ಮತ್ತು ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕೂಡ ಒಟ್ಟಾಗಿ ಸ್ಪರ್ಧಿಸಿದ್ದವು. ಆದರೆ ಚುನಾವಣೆ ಮುಗಿದ ನಂತರ ತೆಲಂಗಾಣದಲ್ಲಿ ಮೈತ್ರಿ ಮಾಡಿಕೊಂಡ ಬಿಜೆಪಿ ಸೌಜನ್ಯಕ್ಕೆ ಕೂಡ ನಮಗೆ ತಿಳಿಸಿಲ್ಲ ಎಂದು ಆರೋಪಿಸಿದ್ದಾರೆ.

ಅನ್ಯಾಯವಾಗಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ವಿಭಜನೆಯಾದ್ದರಿಂದ ಭಾರೀ ಪ್ರಮಾಣದ ಆದಾಯ ನಷ್ಟವಾಗಿದ್ದಲ್ಲದೆ ಹಣಕಾಸು ಅಸ್ಥಿರತೆ, ರಾಜಧಾನಿ ನಗರವಿಲ್ಲದಿರುವುದು. ಭಾರೀ ಹೊಣೆಗಾರಿಕೆಗಳು, ಕಡಿಮೆ ಆಸ್ತಿಗಳು, ವಿದ್ಯುತ್ ಶಕ್ತಿ ಕೊರತೆ, ಸಂಸ್ಥೆಗಳ ಕೊರತೆ ಮತ್ತು ಕಳಪೆ ಮೂಲಸೌಕರ್ಯಗಳನ್ನು ಕೂಡ ಎದುರಿಸಬೇಕಾಗುತ್ತಿದೆ ಎಂದು ವಿವರಿಸಿದ್ದಾರೆ.

Andhra special status,Chandrababu Naidu, writes to Amit Shah
.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ