ಭಾರತೀಯ ಸೇನೆ ಮೋದಿ ಸ್ವತ್ತಲ್ಲ: ರಾಹುಲ್ ಗಾಂಧಿ ಕಿಡಿ

ನವದೆಹಲಿ: ಸರ್ಜಿಕಲ್ ಸ್ಟ್ರೈಕ್ ಎಂದರೆ ವಿಡಿಯೋ ಗೇಮ್ ಅಲ್ಲ ಎಂದು ಲೇವಡಿ ಮಾಡಿದ್ದ ನರೇಂದ್ರ ಮೋದಿ ಅವರಿಗೆ ತಿರುಗೇಟು ನೀಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮೋದಿ ಅವರ ಈ ಹೇಳಿಕೆ ಭಾರತೀಯ ಸೇನೆಗೆ ಮಾಡಿದ ಅವಮಾನ ಎಂದು ಆರೋಪಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಈ ಹಿಂದೆ ಅಧಿಕಾರದಲ್ಲಿದ್ದ ಪಕ್ಷವನ್ನಷ್ಟೇ ಲೇವಡಿ ಮಾಡಿಲ್ಲ. ದೇಶದ ಸೇನೆಯ ಬಗ್ಗೆಯೂ ಹಗುರವಾಗಿ ಮಾತನಾಡಿದ್ದಾರೆ. ಭಾರತೀಯ ಸೇನೆ ಕೇವಲ ಮೋದಿ ಅವರ ಸ್ವತ್ತಲ್ಲ. ಮೋದಿ ಅವರಂತೆ ನಾವು ಸೇನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ದೇಶದ ಆರ್ಥಿಕ ಪರಿಸ್ಥಿತಿಯನ್ನ ಮೋದಿ ನಾಶಪಡಿಸಿದ್ದಾರೆ. ಮೋದಿ ಅವರು ಭರವಸೆ ನೀಡಿದ್ದ 2 ಕೋಟಿ ಉದ್ಯೋಗ ಎಲ್ಲಿ ಎಂದು ದೇಶದ ಯುವಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಅವರಿಂದ ಯಾವುದೇ ಉತ್ತರವಿಲ್ಲ. ರಾಷ್ಟದ ರೈತರಿಗೆ ಮೋದಿ ಏನೂ ಮಾಡಿಲ್ಲ. 5 ವರ್ಷಗಳ ಹಿಂದೆ ಮೋದಿ 15 ವರ್ಷ ಆಡಳಿತ ನಡೆಸಲಿ ಎಂದು ಹೇಳುತ್ತಿದ್ದರು. ಆದರೆ ಇದೀಗ ಕಾಂಗ್ರೆಸ್ ಮೋದಿ ಅವರನ್ನು ಕೆಡವಿದೆ ಎಂದರು.

ಅಲ್ಲದೆ ತಮ್ಮ ಮೇಲೆ ಮಾಡಿರುವ ಭ್ರಷ್ಟಾಚಾರದ ಆರೋಪಗಳಿಗೆ ತನಿಖೆ ಎದುರಿಸಲು ನಾನು ಸಿದ್ಧ. ಶೀಘ್ರ ತನಿಖೆಗೆ ಆದೇಶ ನಡೆಸಿ ಎಂದು ಸವಾಲು ಎಸೆದರು.

ಮೋದಿ ಹೇಳಿದ್ದೇನು?:
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾಜಸ್ಥಾನದ ಸಿಕಾರ್ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ಕಾಂಗ್ರೆಸ್ ಸುಳ್ಳುಗಳ ಸರಮಾಲೆಯನ್ನು ಹೇಳುತ್ತಿದೆ.

ಮೊದಲು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ವ್ಯಂಗ್ಯವಾಡಿದ್ದ ಕಾಂಗ್ರೆಸ್ ಈಗ ‘ಮೀ ಟೂ’ ಎಂದು ಹೇಳುತ್ತಿದೆ ಎಂದು ವ್ಯಂಗ್ಯವಾಡಿದ್ದರು.

ಯುಪಿಎ ಅವಧಿಯಲ್ಲಿ ಕೇವಲ ಪೇಪರ್ ಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆದಿದೆ ಅಷ್ಟೇ. ಮೊದಲು ಯುಪಿಎ ಅವಧಿಯಲ್ಲಿ 3 ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು ಎಂದು ಹೇಳುತ್ತಿದ್ದ ಕಾಂಗ್ರೆಸ್, ಈಗ 6 ಬಾರಿ ನಡೆದಿತ್ತು ಎಂದು ಹೇಳುತ್ತಿದೆ. ಮುಂದಿನ ದಿನಗಳಲ್ಲಿ ಇದು 600 ಕೂಡ ಆಗಬಹುದು ಎಂದಿದ್ದರು. ಅಲ್ಲದೇ ಸರ್ಜಿಕಲ್ ಸ್ಟ್ರೈಕ್ ಎಂದರೆ ವಿಡಿಯೋ ಗೇಮ್ ಅಲ್ಲ ಎಂದು ಕುಟುಕಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ