ರಾಹುಲ್ ಗಾಂಧಿಗೆ ಕೈ ತಪ್ಪಲಿದೆಯೇ ಪ್ರಧಾನಿ ಅಭ್ಯರ್ಥಿ ಪಟ್ಟ…?

ನವದೆಹಲಿ:ಜು-25: ಇತ್ತೀಚೆಗೆ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ 2019ರ ಚುನಾವಣೆಗೆ ರಾಹುಲ್‌ ಗಾಂಧಿಯವರೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು. ಆದರೆ ಪಕ್ಷದ ವತಿಯಿಂದಲೇ ಅದನ್ನು ಬದಲು ಮಾಡಲು ಸಿದ್ಧತೆ ನಡೆದಿದೆ.

ವಿಪಕ್ಷಗಳು ಒಪ್ಪುವ ನಾಯಕನನ್ನು ಪ್ರಧಾನಿಯನ್ನಾಗಿ ಬಿಂಬಿಸಲು ಸ್ವತ: ಕಾಂಗ್ರೆಸ್ ಹೊರಟಿದೆ. ಕಾಂಗ್ರೆಸ್ ಪಕ್ಷವಲ್ಲದ ಹಾಗೂ ಪ್ರಾದೇಶಿಕ ಪಕ್ಷ ಒಪ್ಪುವ ನಾಯಕರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಲು ಕಾಂಗ್ರೆಸ್ ಒಪ್ಪಿಗೆ ನೀಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಲೋಕಸಭೆಯಲ್ಲಿ ಕಾಂಗ್ರೆಸ್ ಬೆಂಬಲಿತ ಮಹಾ ಮೈತ್ರಿಕೂಟಕ್ಕೆ ಬಹುಮತ ದೊರೆತರೆ ಪ್ರಧಾನಿ ಅಭ್ಯರ್ಥಿ ಬಗ್ಗೆ ಮೈತ್ರಿಕೂಟದೊಂದಿಗೆ ಕೈ ಪಕ್ಷ ಚರ್ಚಿಸಲಿದೆ. ಮೈತ್ರಿಕೂಟವನ್ನು ಕಟ್ಟಲು ಕಾಂಗ್ರೆಸ್ ಹೆಚ್ಚು ಆದ್ಯತೆ ತೋರಿಸುತ್ತಿದ್ದು, ಈ ಹಿನ್ನೆಲೆ ಬಿಜೆಪಿಯೇತರ ಪಕ್ಷಗಳಿಗೆ ಸಹಕಾರ ನೀಡಲು ಪ್ರಧಾನಿ ಅಭ್ಯರ್ಥಿಯ ವಿಚಾರದಲ್ಲಿ ರಾಜಿಯಾಗಲು ಸಹ ಎಐಸಿಸಿ ಸಿದ್ಧವಿದೆ ಎಂದು ಹೇಳಲಾಗುತ್ತಿದೆ.

ಸದ್ಯ, ನಾಯಕತ್ವಕ್ಕಿಂತ ಬಿಜೆಪಿ ನೇತೃತ್ವದ ಸರಕಾರವನ್ನು ಹೊರಗಿಡುವುದೇ ಕಾಂಗ್ರೆಸ್‌ನ ಪ್ರಮುಖ ಆದ್ಯತೆಯಾಗಿದೆ ಎನ್ನಲಾಗಿದೆ. ಇನ್ನು, ಹಲವು ಪಕ್ಷಗಳು ಮಹಾ ಮೈತ್ರಿಕೂಟ ಸೇರಲು ಮುಂದಾಗುತ್ತಿರುವುದರಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳ ಒಕ್ಕೂಟ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ಕಾಂಗ್ರೆಸ್ ಹಾಗೂ ಎಡಪಕ್ಷಗಳು ವಿಶ್ವಾಸ ವ್ಯಕ್ತಪಡಿಸಿವೆ.

ಇನ್ನೊಂದೆಡೆ, ಪ್ರಧಾನಿ ಅಭ್ಯರ್ಥಿ ವಿಚಾರದಲ್ಲಿ ಕಾಂಗ್ರೆಸ್ ರಾಜಿ ಮಾಡಿಕೊಳ್ಳುವುದರಿಂದ ಟಿಎಂಸಿಯ ಮಮತಾ ಬ್ಯಾನರ್ಜಿ, ಬಿಎಸ್‌ಪಿಯ ಮಾಯಾವತಿ ಹಾಗೂ ಎಸ್‌ಪಿ, ಆರ್‌ಜೆಡಿಯಂತಹ ಪ್ರಾದೇಶಿಕ ಪಕ್ಷಗಳು ಮೈತ್ರಿಕೂಟದಲ್ಲಿ ಹೆಚ್ಚಿನ ಬಲ ಸಿಗಲಿದೆ.

ಇನ್ನು ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಬಿಜೆಪಿ ವಿರೋಧಿ ಮಹಾಮೈತ್ರಿ ಕೂಟ ರಚನೆಯಾದರೆ ಶೇ.22 ಸ್ಥಾನಗಳನ್ನು ಪಡೆಯಲು ಅನುಕೂಲವಾಗುತ್ತದೆ ಎನ್ನುವುದು ಕಾಂಗ್ರೆಸ್‌ ಲೆಕ್ಕಾಚಾರ. ಬಿಜೆಪಿ ವಿರುದ್ಧ ಟಿಡಿಪಿ, ಶಿವಸೇನೆ ಮುನಿಸಿಕೊಂಡಿ ರುವುದನ್ನೂ ತನಗೆ ಧನಾತ್ಮಕವಾಗಿಸಲು ಅದು ಮುಂದಾಗಿದೆ.

ಒಟ್ಟಾರೆ ಬಿಜೆಪಿಯನ್ನು ಸೋಲಿಸಲು ಹೆಚ್ಚು ಪಕ್ಷಗಳ ಬೆಂಬಲ ಪಡೆಯಲು ಹಾಗೂ ಕೇಸರಿ ಪಕ್ಷ ಅಧಿಕಾರ ರಚಿಸಲು ಕಷ್ಟವಾಗುವಂತೆ ಮಾಡಲು ಇತರೆ ಪಕ್ಷಗಳೊಂದಿಗೆ ಕೈಜೋಡಿಸಲು ಕಾಂಗ್ರೆಸ್ ನಿರ್ಧರಿಸಿದೆ.

Lok sabha election,Rahul gandhi,congress may go along with regional leader as pm nominee

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ