ನಾವು ಬಾಲಾಕೋಟ್ ವೈಮಾನಿಕ ದಾಳಿ ಮಾಡಿದರೆ ಪಾಕ್ ಗೆ ನೋವಾಯ್ತು; ಆದರೆ ಕಾಂಗ್ರೆಸ್-ಜೆಡಿಎಸ್ ಕಣ್ಣಲ್ಲಿ ನೀರುಬಂತು: ಪ್ರಧಾನಿ ಮೋದಿ

ಚಿತ್ರದುರ್ಗ: ಪಾಕಿಸ್ತಾನದ ಬಾಲಾಕೋಟ್ ನಲ್ಲಿ ನಾವು ವೈಮಾನಿಕ ದಾಳಿ ನಡೆಸಿದಾಗ ಪಾಕಿಸ್ತಾನಕ್ಕೆ ನೋವಾಯಿತು. ಆದರೆ ಇಲ್ಲಿನ ಕಾಂಗ್ರೆಸ್-ಜೆಡಿಎಸ್ ನಾಯಕರ ಕಣ್ಣಲ್ಲಿ ನೀರು ಬಂತು. ಇದಕ್ಕೆ ಕಾರಣವೇನು ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೋಟೆನಾಡು ಚಿತ್ರದುರ್ಗದಲ್ಲಿ ಬಿಜೆಪಿ ವಿಜಯಸಂಕಲ್ಪ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪುಲ್ವಾಮಾ ದಾಳಿ ಬಗ್ಗೆ ಪಾಕಿಸ್ತಾನವನ್ನು ನಿಂದಿಸುವ ಬದಲು ಕಾಂಗ್ರೆಸ್-ಜೆಡಿಎಸ್ ನವರು ಮೋದಿಯನ್ನು ನಿಂದಿಸುತ್ತಿದ್ದಾರೆ. ಇವರ ವೋಟ್ ಬ್ಯಾಂಕ್ ಇಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿದೆಯೇ ಎಂದು ಪ್ರೆಶ್ನಿಸಿದರು.

ಐದು ವರ್ಷಗಳ ಹಿಂದೆ ನೀವು ನೀಡಿದ್ದ ಅಧಿಕಾರದಿಂದ ದೇಶದೆಲ್ಲೆಡೆ ಹಿಂದೂಸ್ತಾನದ ಘೋಷಣೆಗಳು ಕೇಳುತ್ತಿವೆ. ಈ ಮೊದಲು ನೆರೆಯ ವೈರಿ ಪಾಕಿಸ್ತಾನ ನಮಗೆ ಬೆದರಿಕೆ ಹಾಕುತ್ತಿದ್ದವು. ಅಂದಿನ ಸರ್ಕಾರಗಳು ಯಾವುದೇ ಕ್ರಮಕೈಗೊಳ್ಳುತ್ತಿರಲಿಲ್ಲ. ಇಂದು ಧಮ್ಕಿ ಹಾಕುತ್ತಿದ್ದವರ ಧ್ವನಿ ನಮ್ಮ ದೇಶದಲ್ಲಿ ಕೇಳದಂತೆ ಮಾಡಿದ್ದೇವೆ. ನಾವಿಂದು ಮದಕರಿನಾಯಕನಂತೆ ಹೋರಾಡಬೇಕಾಗಿದೆ ಎಂದರು.

ಇಡೀ ಜಗತ್ತು ನಮ್ಮ ಸೇನೆಯನ್ನು ಹೊಗಳಿದ್ರೆ ಇಲ್ಲಿಯ ಕಾಂಗ್ರೆಸ್ ಮತ್ತು ಜೆಡಿಎಸ್ ಸೇನೆ ನಡೆಸಿದ ಏರ್ ಸ್ಟ್ರೈಕ್ ವಿರೋಧ ಮಾಡುತ್ತಿವೆ. ಇಡೀ ವಿಶ್ವವೇ ಒಪ್ಪಿಕೊಂಡರೂ ಇವರು ಮಾತ್ರ ನಂಬುತ್ತಿಲ್ಲ. ಇಲ್ಲಿನ ಮಹಾಮಿಲಾವಟಿ ದಳ(ಕಾಂಗ್ರೆಸ್-ಜೆಡಿಎಸ್) ಪಾಕಿಸ್ತಾನದ ಬದಲು ಪ್ರಧಾನಿ ಮೋದಿಯನ್ನು ನಿಂದನೆ ಮಾಡುತ್ತಿದೆ. ಇಲ್ಲಿನ ಸಿಎಂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿಬಿಟ್ಟರು. ಭಾರತದ ಯೋಧರ ಪರಾಕ್ರಮದ ಬಗ್ಗೆ ಹೊಗಳಬಾರದು ಎಂದರು.

ಕರ್ನಾಟಕ ಸರ್ಕಾರವನ್ನು ಯಾರು ನಡೆಸುತ್ತಿದ್ದಾರೆ. ಅಧಿಕಾರಕ್ಕಾಗಿ ಎರಡೂ ಸೋತ ಪಕ್ಷಗಳು ನಡೆಸುತ್ತಿವೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಲಾಯಿತು.

ಆದರೆ ಯಾವುದೇ ಅಭಿವೃದ್ಧಿ ಕೆಲಸಗಳು ಮಾತ್ರ ನಡೆಯುತ್ತಿಲ್ಲ. ಕೆಲಸ ಮಾಡುವುದನ್ನು ಬಿಟ್ಟು ಅವರ ಕಾಲು ಇವರು ಎಳೆಯುವ ಕೆಲಸ ಮಾಡುತ್ತಿದ್ದಾರೆ. ಒಮ್ಮೆ ಲಿಂಗಾಯತ ಧರ್ಮ ವಿಭಜಿಸಲು ಯತ್ನಿಸುತ್ತಾರೆ. ಇನ್ನೊಮ್ಮೆ ದೇಶದ ಜನರ ಭಾವನೆಯನ್ನು ಒಡೆಯಲು ಹೊರಡುತ್ತಾರೆ. ಜನರ ಮಧ್ಯೆ ಕಚ್ಚಾಟ ನಡೆಸಿ ಧರ್ಮವನ್ನು ಒಡೆಯುವುದೇ ಕಾಂಗ್ರೆಸ್ ಉದ್ದೇಶವಾಗಿದೆ.

ಎಲ್ಲಿ ಅವಕಾಶ ಸಿಗುತ್ತೋ ಆಗ ಜನರನ್ನು ವಿಭಜಿಸುವುದು. ಸ್ವಾತಂತ್ರ್ಯಾ ನಂತರದಿಂದ ಇವರ ರಣನೀತಿ ಇದೇ ಆಗಿದೆ. ಅವರಿಗೆ ದೇಶದ ಗೌರವ, ಸಂವಿಧಾನದ ಬಗ್ಗೆ ಕಾಳಜಿಯೂ ಇಲ್ಲ ಎಂದು ಗುಡುಗಿದರು.

ರೈತರಿಗೆ ಒಳ್ಳೆಯದು ಮಾಡುವ ಉದ್ದೇಶ ಕಾಂಗ್ರೆಸ್ ಗೆ ಇಲ್ಲ. ಕಾಂಗ್ರೆಸ್-ಜೆಡಿಎಸ್ ಸರ್ಕಾರ ರೈತರ ಸಾಲಮನ್ನಾ ಘೋಷಣೆ ಮಾಡಿತು. ಆದರೆ ಈ ವರೆಗೆ ರೈತರ ಸಾಲಮನ್ನಾ ಆಗಿಲ್ಲ. ಖಾತೆಗೆ ಸಾಲಮನ್ನಾ ಹಣವೂ ಬಂದಿಲ್ಲ. ಬದಲಿಗೆ ರೈತರಿಗೆ ಕೋರ್ಟ್ ನಿಂದ ವಾರೆಂಟ್ ಬರುತ್ತಿದೆ. ದೇಶದ ಕನಸು, ಜನತೆ, ಭಾವನೆಯ ಜತೆ ಕಾಂಗ್ರೆಸ್ ಅನ್ಯಾಯ ಮಾಡಿದೆ. 2ಜಿ ಹಗರಣ,ಸಿಡ್ಬ್ಲ್ಯೂ ಜಿ ಹಗರಣ, ಸಾಲಾ ಮನ್ನಾ ಹಗರಣ ಹೀಗೆ ಎಲ್ಲ ತಪ್ಪಿತಸ್ಥರಿಗೂ ಶಿಕ್ಷೆಯಾಗುವ ಕಾಲ ಸನ್ನಿಹಿತವಾಗಿದೆ. 21ನೇ ಶತಮಾನದಲ್ಲಿ ಯುವಕರು ಕಾಂಗ್ರೆಸ್ ಗೆ ಶಿಕ್ಷೆ ನೀಡಲಿದ್ದಾರೆ ಎಂದರು.

ನಿಮ್ಮೆಲ್ಲರ ಪ್ರೀತಿಗಿಂತ ಜೀವನದಲ್ಲಿ ಇನ್ನೇನಿದೆ. ನವಭಾರತ ನಿರ್ಮಾಣಕ್ಕೆ ನಾವು ಶಕ್ತಿ ಮೀರಿ ಯತ್ನಿಸುತ್ತೇವೆ. ರೈತರಿಗೆ ಎಲ್ಲಾ ರೀತಿ ಸಹಾಯವನ್ನೂ ನಾವು ಮಾಡುತ್ತಿದ್ದೇವೆ. ಕಿಸಾನ್ ಸಮ್ಮಾನ್ ಮೂಲಕ ಈಗಾಗಲೇ 3 ಕೋಟಿ ರೈತರ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. ನಿಗದಿತ ಅವಧಿಯಲ್ಲಿ ಭದ್ರಾ ಮೇಲ್ಡಣೆ ಯೋಜನೆ ಪೂರ್ಣಗೊಳಿಸುತ್ತೆವೆ. ಚಿತ್ರದುರ್ಗ, ದಾವಣಗೆರೆಯಲ್ಲಿ ಸೋಲಾರ್ ಪವರ್ ಅಭಿವೃದ್ಧಿ ಮಾಡುತ್ತೇವೆ. ದಾವಣಗೆರೆ ಸ್ಮಾರ್ಟ್ ಸಿಟಿ ಮಾಡಲು ನಾವು ಬದ್ಧ. ಎಲ್ಲರಿಗೂ ಮನೆ, ವಿದ್ಯುತ್, ಗ್ಯಾಸ್, ಶಿಕ್ಷಣ ನಮ್ಮ ಸಂಕಲ್ಪವಾಗಿದೆ. ಕಿಸಾನ್ ಸಮ್ಮಾನ್ ಯೋಜನೆ ನಾವು ಮತ್ತೊಮ್ಮೆ ಅಧಿಕಾರಕ್ಕೆ ಬಂದ ಎಲ್ಲ ರೈತರಿಗೆ ವಿಸ್ತರಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ಚುನಾವಣೆ ಕೇವಲ ಸಂಸದರನ್ನು ಆಯ್ಕೆ ಮಾಡುವ, ಪ್ರಧಾನಿಯನ್ನು ಆಯ್ಕೆಮಾಡುವ ಚುನಾವಣೆಯಲ್ಲ. ಬಲಿಷ್ಠ ಸರ್ಕಾರವನ್ನು ಆಯ್ಕೆ ಮಾಡುವ ಚುನಾವಣೆ. ಉತ್ತಮ ಭಾರತಕ್ಕಾಗಿ ಬಲಿಷ್ಠ ಸರ್ಕಾರವನ್ನು ಆಯ್ಕೆಮಾಡಿ ಎಂದು ಪ್ರಧಾನಿ ಮನವಿ ಮಾಡಿದರು.

PM Narendra modi,Chitradurga,BJP,vijaya sankalpa rally

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ