ಬಿಜೆಪಿ ವಿರುದ್ಧ ಬಂಡಾಯವೆದ್ದ ಟಿಕೆಟ್ ವಂಚಿತರು: ಎನ್ ಆರ್ ರಮೇಶ್ ಅಭಿಮಾನಿಯಿಂದ ಆತ್ಮಹತ್ಯೆ ಯತ್ನ

ಬೆಂಗಳೂರು ಏ-9: ಬಿಜೆಪಿಯಲ್ಲಿ ಟಿಕೆಟ್ ವಂಚಿತ ಅಭ್ಯರ್ಥಿಗಳ ಬೆಂಬಲಿಗರ ಆಕ್ರೋಶ ಮುಗಿಲುಮುಟ್ಟಿದೆ. ಬಿಬಿಎಂಪಿ ಮಾಜಿ ಸದಸ್ಯ ಎನ್.ಆರ್.ರಮೇಶ್ ಅವರಿಗೆ ಟಿಕೆಟ್ ನೀಡದ ಹಿನ್ನಲೆಯಲ್ಲಿ ಅವರ ಅಭಿಮಾನಿಯೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಟೆಕೆಟ್ ಆಕಾಂಕ್ಷಿಯಾಗಿದ್ದ ಎನ್.ಆರ್.ರಮೇಶ್ ಅವರಿಗೆ ಕೊನೆ ಗಳಿಗೆಯಲ್ಲಿ ಟಿಕೆಟ್ ಕೈತಪ್ಪಿ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಉದಯ ಗರುಡಾಚಾರ್ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ರಮೇಶ್ ಬೆಂಬಲಿಗರು ಚಿಕ್ಕಪೇಟೆ ಮತ್ತು ಯಡಿಯೂರು ವಾರ್ಡ್‍ನಲ್ಲಿ ಅಂಗಡಿ-ಮುಗ್ಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಎನ್.ಆರ್.ರಮೇಶ್ ಅವರ ಅಭಿಮಾನಿಯಾದ ರಾಜೇಂದ್ರ ನಾಯ್ಡು ಎಂಬಾತ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಟಿಕೆಟ್ ವಂಚಿತರಾಗಿರುವ ಎನ್.ಆರ್.ರಮೇಶ್ ಅವರು ಪಕ್ಷದ ತೀರ್ಮಾನದಿಂದ ಆಘಾತಕ್ಕೊಳಗಾಗಿದ್ದು, ಮುಂದೆ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದನ್ನು ತನ್ನ ಬೆಂಬಲಿಗರ ಸಭೆ ನಂತರ ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ.

ಇನ್ನು ರಾಜರಾಜೇಶ್ವರಿನಗರದಿಂದ ಟಿಕೆಟ್ ವಂಚಿತರಾದ ಬಿಬಿಎಂಪಿ ಮಾಜಿ ಸದಸ್ಯ ರಾಮಚಂದ್ರಪ್ಪ ಅವರು ಮಾಜಿ ಡಿಸಿಎಂ ಆರ್.ಅಶೋಕ್ ವಿರುದ್ಧ ಸಿಡಿಮಿಡಿಗೊಂಡಿದ್ದು, ಇನ್ನುಮುಂದೆ ರಾಜಕೀಯ ಬೇಡಿಕೆ ಇಟ್ಟುಕೊಂಡು ಅಶೋಕ್ ಅವರ ಮನೆ ಬಾಗಿಲಿಗೆ ಹೋಗುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಈ ಹಿಂದೆ ಹಲವು ಬಾರಿ ರಾಮಚಂದ್ರಪ್ಪ ಅವರು ಆರ್‍ಆರ್ ನಗರದಿಂದ ಟಿಕೆಟ್ ಕೇಳಿದ್ದರು. ಕಳೆದ ಬಾರಿ ಎಂ.ಶ್ರೀನಿವಾಸ್ ಅವರಿಗೆ ಬಿಜೆಪಿ ಟಿಕೆಟ್ ನೀಡಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಮಚಂದ್ರಪ್ಪ ಅವರಿಗೆ ಟಿಕೆಟ್ ನೀಡುವುದಾಗಿ ಅಶೋಕ್ ಭರವಸೆ ನೀಡಿದ್ದರು. ಆದರೆ, ಮಾತು ತಪ್ಪಿರುವ ಅಶೋಕ್ ಅವರು ಈ ಬಾರಿಯೂ ಟಿಕೆಟ್ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಇನ್ನು ಮುಂದೆ ಅಶೋಕ್ ಮನೆ ಬಾಗಿಲಿಗೆ ಹೋಗುವುದಿಲ್ಲ. ಮುಂದೆ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದನ್ನು ಇಂದು ಸಂಜೆ ಬೆಂಬಲಿಗರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಬಿಎಂಪಿ ಸದಸ್ಯ ಕೆ.ಉಮೇಶ್‍ಶೆಟ್ಟಿ ಅವರು ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದರು. ಕೊನೆ ಗಳಿಗೆಯಲ್ಲಿ ತಮ್ಮ ರಾಜಕೀಯ ಗುರು ವಿ.ಸೋಮಣ್ಣ ಅವರಿಗೆ ಕ್ಷೇತ್ರ ಬಿಟ್ಟುಕೊಡುವ ಪರಿಸ್ಥಿತಿ ಬಂದೊದಗಿದ ಹಿನ್ನೆಲೆಯಲ್ಲಿ ಶೆಟ್ಟಿ ಅವರು ಫೋನ್ ಸ್ವಿಚ್‍ಆಫ್ ಮಾಡಿಕೊಂಡು ಯಾರ ಕಣ್ಣಿಗೂ ಬೀಳದಂತೆ ನಾಪತ್ತೆಯಾಗಿದ್ದಾರೆ.

ಈ ನಡುವೆ ಅತೃಪ್ತರನ್ನು ಸಮಾಧಾನಪಡಿಸಲು ಪಕ್ಷದ ವರಿಷ್ಠರು ಯತ್ನಿಸುತ್ತಿರುವರಾದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಒಟ್ಟಾರೆ ಬಿಜೆಪಿ 72 ಮಂದಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಮಾಡುತ್ತಿದ್ದಂತೆಯೇ ಟಿಕೆಟ್ ವಂಚಿತರು ಬಂಡಾಯವೆದ್ದಿದ್ದು, ಪಕ್ಷ ಯಾವ ರೀತಿ ನಿರ್ಧಾರ ಕೈಗೊಳ್ಳಲಿದೆ ಕಾದುನೋಡಬೇಕಿದೆ.

Assembly Elections 2018,BJP, ticket, NR Ramesh Supporter, Tried To Commit Suicide

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ