ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ: ಘಟಾನುಘಟಿ ನಾಯಕರು ಕೂಡ ಗೇಟ್‍ಪಾಸ್?

ಬೆಂಗಳೂರು,ಜು.23- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಜೊತೆಗೆ ಈ ಬಾರಿ ಸಂಪುಟದಿಂದ ಘಟಾನುಘಟಿ ನಾಯಕರು ಕೂಡ ಗೇಟ್‍ಪಾಸ್ ಪಡೆಯಲಿದ್ದಾರೆ.

ಇತ್ತೀಚೆಗೆ ಕೇಂದ್ರ ಸರ್ಕಾರ ಯಾವ ರೀತಿ ಕೆಲವು ಹಿರಿಯರಿಗೆ ಕೊಕ್ ನೀಡಿ ಪಕ್ಷ ಸಂಘಟನೆಗೆ ನಿಯೋಜನೆ ಮಾಡಿತೋ ಅದೆ ಮಾದರಿಯಲ್ಲಿ ಕರ್ನಾಟಕದಲ್ಲೂ ಯುವ ಮತ್ತು ಹಳಬರನ್ನೊಳಗೊಂಡ ಸಂಪುಟ ಪುನಾರಚನೆಯಾಗುವುದು ಖಾತರಿಯಾಗಿದೆ.

ಕೇಂದ್ರದಲ್ಲಿ ಪ್ರಭಾವಿ ಸಚಿವರೆನಿಸಿಕೊಂಡಿದ್ದ ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವ್ಡೇಕರ್, ಡಾ.ಹರ್ಷವರ್ಧನ್, ಡಿ.ವಿ.ಸದಾನಂದಗೌಡ, ರಮೇಶ್ ಪೋಕ್ರಿಯಾಲ್, ಸಂತೋಷ್‍ಕುಮಾರ್ ಗಂಗ್ವಾರ್, ಬಾಬೂಲ್ ಸುಪ್ರಿಯೋ, ಪ್ರತಾಪ್‍ಚಂದ್ರ ಸಾರಂಗಿ ಸೇರಿದಂತೆ ಅನೇಕರನ್ನು ಕೈಬಿಟ್ಟು ಪಕ್ಷ ಸಂಘಟನೆಗೆ ನಿಯೋಜನೆ ಮಾಡಲಾಯಿತು.

ಈಗ ಇದೇ ಮಾದರಿಯನ್ನು ಅನುಸರಿಸಲಿರುವ ಕೇಂದ್ರ ವರಿಷ್ಠರು, ಹಿರಿಯ ಸಚಿವರೆನಿಸಿಕೊಂಡ ಸುಮಾರು 10ಕ್ಕೂ ಹೆಚ್ಚು ಸಚಿವರನ್ನು ಕೈಬಿಟ್ಟು ಪಕ್ಷ ಸಂಘಟನೆಗೆ ತೊಡಗಿಸಿಕೊಳ್ಳುವಂತೆ ಸೂಚನೆ ನೀಡಲಿದ್ದಾರೆ ಎಂದು ಹೇಳಲಾಗಿದೆ.

ಇದರಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರುಗಳೆಂದರೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಹಿರಿಯರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಎಸ್.ಸುರೇಶ್‍ಕುಮಾರ್, ವಿ.ಸೋಮಣ್ಣ, ಬಸವರಾಜ್ ಬೊಮ್ಮಾಯಿ, ಕೋಟಾ ಶ್ರೀನಿವಾಸ್ ಪೂಜಾರಿ, ಪ್ರಭು ಚವ್ಹಾಣ್, ಶಶಿಕಲಾ ಜೊಲ್ಲೆ ಸೇರಿದಂತೆ ಒಂದು ಡಜನ್ ಸಚಿವರು ಸಂಪುಟದಿಂದ ಗೇಟ್‍ಪಾಸ್ ಪಡೆಯುವ ಸಾಧ್ಯತೆಗಳು ನಿಚ್ಚಳವಾಗಿದೆ.

ಸದನದಲ್ಲಿ ಪ್ರತಿಪಕ್ಷಗಳನ್ನು ಎದುರಿಸುವ ಅನಿವಾರ್ಯತೆ ಇರುವುದರಿಂದ ಡಿಸಿಎಂ ಗೋವಿಂದ ಕಾರಜೋಳ, ಬಸವರಾಜ್ ಬೊಮ್ಮಾಯಿ ಸ್ಥಾನ ಉಳಿಸಿಕೊಳ್ಳುವ ಸಂಭವವಿದೆ.

ಬೆಂಗಳೂರಿನಲ್ಲಿ ಬಿಬಿಎಂಪಿ ಚುನಾವಣೆ ಹಿನ್ನೆಲೆ ಕಾರಣ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾಗಿರುವ ಆರ್.ಅಶೋಕ್ ಅವರನ್ನು ಸಂಪುಟದಲ್ಲಿ ಮುಂದುವರೆಸಬಹುದು. ಈಗಿನ ಲೆಕ್ಕಾಚಾರದಂತೆ ಜಗದೀಶ್ ಶೆಟ್ಟರ್, ಈಶ್ವರಪ್ಪ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.

ಬೆಂಗಳೂರಿನಲ್ಲಿ ಅನ್ಯ ಪಕ್ಷಗಳ ನಾಯಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಿಂಡಿಕೇಟ್ ಸ್ಥಾಪಿಸಿಕೊಂಡಿರುವ ಕೆಲವರು ಪಕ್ಷದ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.

ಹೀಗಾಗಿ ಈ ಸಿಂಡಿಕೇಟ್‍ನ್ನು ಹೊಡೆದುರುಳಿಸಬೇಕೆಂಬ ಲೆಕ್ಕಾಚಾರ ರಾಜ್ಯವನ್ನು ಪ್ರತಿನಿಧಿಸುವ ದೆಹಲಿ ನಾಯಕರಲ್ಲಿದೆ.

ಇನ್ನು ಸರ್ಕಾರ ಬಂದಾಗಲೆಲ್ಲ ಹಿರಿತನ ಕೋಟಾದಲ್ಲಿ ಸಚಿವ ಸ್ಥಾನ ಪಡೆಯುತ್ತಿದ್ದ ಎಸ್.ಸುರೇಶ್‍ಕುಮಾರ್, ಸೋಮಣ್ಣ ಅವರನ್ನು ಸಹ ಸಂಪುಟದಿಂದ ಕೈಬಿಟ್ಟರೂ ಅಚ್ಚರಿ ಇಲ್ಲ.

ಯಾವುದೇ ಆರೋಪಕ್ಕೆ ಸಿಲುಕದೆ ಸದನದಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಜೆ.ಸಿ.ಮಾಧುಸ್ವಾಮಿ, ಬಸವರಾಜ್ ಬೊಮ್ಮಾಯಿ ಮುಂದುವರೆಯುವ ಸಾಧ್ಯತೆಗಳು ಸ್ಪಷ್ಟವಾಗಿವೆ.

ಯುವಕರಿಗೆ ಮನ್ನಣೆ:
ಈ ಬಾರಿ ಸಂಪುಟ ಪುನಾರಚನೆಯಲ್ಲಿ ಕಟ್ಟಾ ಹಿಂದುತ್ವವಾದಿಗಳು ಸ್ಥಾನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ ಕಾರ್ಕಳದ ಶಾಸಕ ವಿ.ಸುನೀಲ್‍ಕುಮಾರ್, ಅರವಿಂದ್ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್, ಅಪ್ಪಚ್ಚುರಂಜನ್, ಪ್ರೀತಂಗೌಡ, ರಾಜುಗೌಡ ನಾಯಕ್, ರೇಣುಕಾಚಾರ್ಯ ಮತ್ತಿತರರು ಸಂಭವನೀಯ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಸರ್ಕಾರ ಮತ್ತು ಪಕ್ಷದ ನಡುವೆ ಯಾವುದೇ ರೀತಿಯ ಸಮನ್ವಯ ಕೊರತೆ ಉಂಟಾಗದಂತೆ ಸಮತೋಲನವನ್ನು ಕಾಪಾಡಿಕೊಂಡು 2023ರ ಚುನಾವಣೆಯಲ್ಲೂ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಕಟ್ಟಾ ಹಿಂದುತ್ವವಾದಿಗಳಿಗೆ ಮಣೆ ಹಾಕುವ ಸಂಭವವಿದೆ.

ವಲಸಿಗರಲ್ಲೂ ಆತಂಕ:
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಹಾಗೂ ಹೊಸ ಸಂಪುಟ ರಚನೆಯಾಗುವ ವದಂತಿಗಳು ತೀವ್ರ ಸಂಚಲನ ಮೂಡಿಸಿದ್ದು, ಈ ಬೆಳವಣಿಗೆ ಇದೀಗ ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಾದ ವಲಸಿಗ ಸಚಿವರಲ್ಲಿ ಚಿಂತೆ ಹಾಗೂ ಆತಂಕ ಹುಟ್ಟುಹಾಕಿದೆ.

ವಲಸಿಗ ನಾಯಕರು ಯಡಿಯೂರಪ್ಪ ಅವರನ್ನೇ ನಂಬಿಕೊಂಡು ತಮ್ಮ ಪಕ್ಷಗಳನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಹಾಗೆ ವಲಸೆ ಬರುವ ಸಮಯದಲ್ಲಿ ಅವರಿಗೆ ಸ್ಥಾನಮಾನದ ಭರವಸೆ ನೀಡಿದ್ದು, ಉಪ ಚುನಾವಣೆಗಳನ್ನು ನಡೆಸಿದ್ದು ಬಳಿಕ ಸ್ಥಾನಮಾನ ಲಭಿಸುವಂತೆ ನೋಡಿಕೊಂಡಿದ್ದು ಯಡಿಯೂರಪ್ಪ ಅವರಾಗಿದ್ದಾರೆ. ಹೀಗಾಗಿ ಇದೀಗ ಯಡಿಯೂರಪ್ಪ ಅವರು ನಾಯಕತ್ವ ಸ್ಥಾನದಿಂದ ಕೆಳಗಿಳಿದರೆ ತಮ್ಮ ಗತಿಯೇನು ಎಂಬ ಆತಂಕ ಕಾಡಲು ಆರಂಭಿಸಿದೆ.

ಹೊಸ ಮುಖ್ಯಮಂತ್ರಿ ಆಯ್ಕೆ ಬಳಿಕ ಸಂಪುಟಕ್ಕೆ ಸರ್ಜರಿಯಾಗಲಿದ್ದು, ಅನೇಕ ಸಚಿವರನ್ನು ಕೈಬಿಡಲಾಗುತ್ತದೆ ಎಂಬ ವದಂತಿಗಳು ಈಗಾಗಲೇ ದಟ್ಟವಾಗಿ ಹಬ್ಬಿದ್ದರಿಂದ ಸಹಜವಾಗಿಯೇ ವಲಸಿಗ ಸಚಿವರು ಒತ್ತಡದಲ್ಲಿ ಸಿಲುಕುವಂತೆ ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ