ದೇಶದ ಸಾರ್ವಬೌಮತೆಗೆ ಸವಾಲಾಗುವ ಪ್ರಯತ್ನವನ್ನು ಸಹಿಸಲಾಗದು: ಪ್ರಧಾನಿ ಮೋದಿ

ನವದೆಹಲಿ:ಫೆ-23: ದೇಶದ ಸಾರ್ವಭೌಮತೆ ಮತ್ತು ಏಕತೆಗೆ ಸವಾಲು ಹಾಕುವ ಯಾವುದೇ ಪ್ರಯತ್ನಗಳನ್ನು ಸಹಿಸಲಾಗದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಹಾಗೂ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಈ ಸಂದರ್ಭದಲ್ಲಿ ಭಾರತ ಮತ್ತು ಕೆನಡಾ ದೇಶಗಳು ಆರು ಒಪ್ಪಂದಗಳಿಗೆ ಸಹಿ ಹಾಕಿವೆ.

ಈ ವೇಳೆ ನಡೆದ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ರಾಜಕೀಯ ಪ್ರೇರಣೆಗಳಿಗೆ ಮತ್ತು ಪ್ರತ್ಯೇಕತಾವಾದವನ್ನು ಪ್ರಚುರಪಡಿಸಲು ರಾಜಕೀಯವನ್ನು ದುರುಪಯೋಗಪಡಿಸಿಕೊಳ್ಳುವವರಿಗೆ ಅವಕಾಶ ಮಾಡಿಕೊಡಬಾರದು. ನಮ್ಮ ಏಕತೆ ಮತ್ತು ಸಮಗ್ರತೆಗೆ ಸವಾಲೆಸೆಯುವವರನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದರು.

ರಕ್ಷಣಾ ಕಾರ್ಯ, ಭಯೋತ್ಪಾದನೆ ಮತ್ತು ತೀವ್ರಗಾಮಿತ್ವಗಳು ದೇಶಗಳ ಬೆಳವಣಿಗೆಗೆ ಹೇಗೆ ಬೆದರಿಕೆಯಾಗಿವೆ ಮತ್ತು ಅವುಗಳನ್ನು ಹೊಡೆದೋಡಿಸಲು ಒಗ್ಗಟ್ಟಿನಿಂದ ಹೋರಾಡುವ ಅಗತ್ಯಗಳ ಕುರಿತು ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.

ಕೆನಡಾ ಜೊತೆ ಕಾರ್ಯತಂತ್ರದ ಸಹಭಾಗಿತ್ವವನ್ನು ಮುಂದುವರಿಸಲು ಭಾರತ ಮಹತ್ವ ನೀಡುತ್ತದೆ. ಉತ್ತರ ಕೊರಿಯಾ ಮತ್ತು ಮಾಲ್ಡೀವ್ಸ್ ವಿಚಾರದಲ್ಲಿ ನಾವು ಸಮಾನ ಆಲೋಚನೆಗಳನ್ನು ಹೊಂದಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.

ಕೆನಡಾ ದೇಶ ಅತಿ ಹೆಚ್ಚು ಇಂಧನ ಶಕ್ತಿ ಹೊಂದಿರುವ ದೇಶವಾಗಿದ್ದು ನಮ್ಮ ದೇಶದ ಹೆಚ್ಚುತ್ತಿರುವ ಇಂಧನ ಬೇಡಿಕೆಗಳನ್ನು ಕೂಡ ಪೂರೈಸಲಿದೆ. ಅಲ್ಲದೆ ಉನ್ನತ ಶಿಕ್ಷಣ ಪಡೆಯಲು ಇಚ್ಛಿಸುವ ಭಾರತೀಯ ವಿದ್ಯಾರ್ಥಿಗಳಿಗೆ ಕೆನಡಾ ಒಂದು ಅತ್ಯುತ್ತಮ ದೇಶ, ಇಂದು 1 ಲಕ್ಷದ 20 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

PM Narendra Modi,Canadian PM Justin Trudeau,Joint Press Conference

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ