ನವದೆಹಲಿ: ಮಹಾರಾಷ್ಟ್ರದಲ್ಲಿ ಡ್ಯಾನ್ಸ್ ಬಾರ್ ಗಳ ಕಾರ್ಯನಿರ್ವಹಣೆಗೆ ಅನುಮತಿ ನೀಡುವುದಕ್ಕೆ ನಿರ್ಬಂಧ ಹೇರಿ 2016ರಲ್ಲಿ ತಂದಿದ್ದ ನಿಯಮಕ್ಕೆ ಸುಪ್ರೀಂ ಕೋರ್ಟ್ ಕೆಲವೊಂದು ಬದಲಾವಣೆಗಳನ್ನು ಮಾಡಿ ಆದೇಶ ಹೊರಡಿಸಿದೆ.
ಜಸ್ಟೀಸ್ ಎಕೆ ಸಿಖ್ರಿ ನೇತೃತ್ವದ ಪೀಠ, ಡ್ಯಾನ್ಸ್ ಬಾರ್ ಲೈಸೆನ್ಸ್ ಪಡೆಯಲು ಮಹಾರಾಷ್ಟ್ರ ಸರ್ಕಾರ ವಿಧಿಸಿದ್ದ ಕಠಿಣ ನಿಯಮವನ್ನು ಸುಪ್ರೀಂಕೋರ್ಟ್ ಸಡಿಲಗೊಳಿಸಿದ್ದು, ಈ ಮೂಲಕ, ಮುಂಬೈ ಮತ್ತು ಮಹಾರಾಷ್ಟ್ರದ ಇತರ ನಗರಗಳಲ್ಲಿ ಡ್ಯಾನ್ಸ್ ಬಾರ್ ತೆರೆಯಲು ಹಾದಿ ಸುಗಮಗೊಳಿಸಿದೆ.
ಡ್ಯಾನ್ಸ್ ಬಾರ್ ಗಳಲ್ಲಿ ಸಿಸಿಟಿವಿ ಕಡ್ಡಾಯವಾಗಿ ನಿಯೋಜಿಸಬೇಕೆಂದು ತಂದಿದ್ದ ಕಾನೂನಿಗೆ ವಿನಾಯ್ತಿ ನೀಡಿದ ನ್ಯಾಯಾಲಯ, ಸಿಸಿಟಿವಿ ಅಳವಡಿಸುವುದರಿಂದ ಗ್ರಾಹಕರ ಖಾಸಗಿತನಕ್ಕೆ ಧಕ್ಕೆಯುಂಟಾಗುತ್ತದೆ ಎಂದು ಹೇಳಿದೆ. ಡ್ಯಾನ್ಸ್ ಬಾರ್ ಗಳಲ್ಲಿ ನೃತ್ಯ ಮಾಡುವವರಿಗೆ ಗ್ರಾಹಕರು ಟಿಪ್ಸ್ ರೂಪದಲ್ಲಿ ಹಣ ನೀಡುವುದಕ್ಕೆ ಅವಕಾಶ ನೀಡಿದೆ. ಆದರೆ ನೃತ್ಯ ಮಾಡುತ್ತಿರುವಾಗ ಡ್ಯಾನ್ಸರ್ಸ್ ಮೇಲೆ ನೋಟುಗಳನ್ನು ಗ್ರಾಹಕರು ಎಸೆಯುವಂತಿಲ್ಲ ಎಂದು ನಿರ್ಬಂಧ ವಿಧಿಸಿದೆ.
ಧಾರ್ಮಿಕ ಕೇಂದ್ರಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ 1 ಕಿಲೋ ಮೀಟರ್ ಒಳಗೆ ಬಾರ್ ಗಳನ್ನು ತೆರೆಯುವಂತಿಲ್ಲ ಎಂಬ ನಿಯಮ ಕಡ್ಡಾಯವನ್ನು ಕೂಡ ಸುಪ್ರೀಂ ಕೋರ್ಟ್ ತೆಗೆದುಹಾಕಿದೆ. ಡ್ಯಾನ್ಸ್ ಬಾರ್ ಗಳು ಸಾಯಂಕಾಲ 6 ಗಂಟೆಯಿಂದ ರಾತ್ರಿ 11.30ರವರೆಗೆ ಮಾತ್ರ ಕಾರ್ಯನಿರ್ವಹಿಸಬೇಕೆಂಬ ಸರ್ಕಾರದ ನಿಯಮವನ್ನು ಎತ್ತಿಹಿಡಿದಿದೆ.
ರಾಜ್ಯದಲ್ಲಿ ಡ್ಯಾನ್ಸ್ ಬಾರ್ ಗಳನ್ನು ತೆರೆಯಲು ಅನುಮತಿ ಕೋರಿ ಹೊಟೇಲ್ ಮಾಲಿಕರು ಸಲ್ಲಿಸಿದ್ದ ಅರ್ಜಿಗಳ ಸ್ಥಿತಿ ಬಗ್ಗೆ ತಿಳಿಸುವಂತೆ ಸುಪ್ರೀಂ ಕೋರ್ಟ್ ಕಳೆದ ವರ್ಷ ಮಾರ್ಚ್ 28ರಂದು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತ್ತು. ಈ ಬಗ್ಗೆ ಬಾರ್ ಗರ್ಲ್ಸ್ ಗಳ ಪ್ರತಿಕ್ರಿಯೆಯನ್ನು ಸಹ ಕೋರ್ಟ್ ಕೇಳಿತ್ತು.ಹಳೆ ನಿಯಮದಡಿ ಡ್ಯಾನ್ಸ್ ಬಾರ್ ತೆರೆಯಲು ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಯ ಬಗ್ಗೆ ತ್ವರಿತವಾಗಿ ನಿರ್ಧರಿಸಬೇಕೆಂದು ಕಳೆದ ವರ್ಷ ಜನವರಿ 11ರಂದು ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ಆದೇಶ ನೀಡಿತ್ತು. ನವೆಂಬರ್ 24, 2016ರಂದು ತಂದಿದ್ದ ಆದೇಶವನ್ನು ಗಮನದಲ್ಲಿರಿಸಿಕೊಂಡು, ಡ್ಯಾನ್ಸ್ ಬಾರ್ ನಡೆಸಲು ಅರ್ಜಿ ಸಲ್ಲಿಸಿ ಅನುಮತಿ ಪಡೆುದಕೊಳ್ಳಬೇಕೆಂದು ಇದಕ್ಕೆ ಸಂಬಂಧಪಟ್ಟ ಇಲಾಖೆಗೆ ಅರ್ಜಿ ಸಲ್ಲಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ.
Supreme Court, Okays Dance Bars With Liquor