ಸುಪ್ರೀಂಕೋರ್ಟ್ ಪಂಚ ನ್ಯಾಯಾಧೀಶರ ಹೊಸ ಪೀಠವೊಂದನ್ನು ರಚಿಸಲಿದ್ದು, ಜ.29ರಿಂದ ವಿಚಾರಣೆ ಆರಂಭ

ನವದೆಹಲಿ, ಜ.10-ಅಯೋಧ್ಯೆ ರಾಮಜನ್ಮ ಭೂಮಿ ವಿವಾದಕ್ಕೆ ಅಂತ್ಯ ಹಾಡಲು ಸುಪ್ರೀಂಕೋರ್ಟ್ ಪಂಚ ನ್ಯಾಯಾಧೀಶರ ಹೊಸ ಪೀಠವೊಂದನ್ನು ರಚಿಸಲಿದ್ದು, ಜ.29ರಿಂದ ವಿಚಾರಣೆ ಆರಂಭವಾಗಲಿದೆ.

ರಾಮಜನ್ಮ ಭೂಮಿ ಮತ್ತು ಬಾಬರಿ ಮಸೀದಿ ವಿವಾದ ಇತ್ಯರ್ಥಕ್ಕಾಗಿ ರಚಿಸಲಾಗಿದ್ದ ಪಂಚ ಸದಸ್ಯರನ್ನು ಒಳಗೊಂಡ ಸಾಂವಿಧಾನಿಕ ಪೀಠ ಇಂದು ತನ್ನ ಮೊದಲ ಕಲಾಪ ನಡೆಸಿ ಮುಂದಿನ ವಿಚಾರಣೆ ದಿನಾಂಕ ನಿಗದಿಗೊಳಿಸಬೇಕಿತ್ತು.

ಇಂದು ಈ ಸಂಬಂಧ ವಿಚಾರಣೆಗಾಗಿ ಕೋರ್ಟ್ ಕಲಾಪ ಆರಂಭವಾಗುತ್ತಿದ್ದಂತೆ ಮುಸ್ಲಿಂ ಸಂಘಟನೆಯೊಂದರ ಪರ ವಕಾಲತ್ತು ವಹಿಸಿರುವ ಹಿರಿಯ ವಕೀಲ ರಾಜೀವ್ ಧವನ್, ಪಂಚ ನ್ಯಾಯಾಧೀಶರ ಪೀಠದಲ್ಲಿ ನ್ಯಾಯಮೂರ್ತಿ ಯು.ಉದಯ್‍ಲಲಿತ್ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಅಯೋಧ್ಯೆ ವಿವಾದ ಪ್ರಕರಣದಲ್ಲಿ 1994ರಲ್ಲಿ ಬಿಜೆಪಿ ಮುಖಂಡ ಮತ್ತು ಉತ್ತರಪ್ರದೇಶ ಮುಖ್ಯ ನ್ಯಾಯಮೂರ್ತಿ ಕಲ್ಯಾಣ್‍ಸಿಂಗ್ ಅವರ ಪರ ಆಗ ವಕೀಲರಾಗಿದ್ದ ಉದಯ್‍ಲಲಿತ್ ವಾದ ಮಂಡಿಸಿದ್ದನ್ನು ಧವನ್ ಪ್ರಸ್ತಾಪಿಸಿದರು. ಅವರು ಈ ಪೀಠದಲ್ಲಿ ಇರಬಾರದು ಎಂದು ಧವನ್ ಒತ್ತಾಯಿಸದೇ ಇದ್ದರೂ ನ್ಯಾಯಮೂರ್ತಿ ಲಲಿತ್ ತಾವಾಗಿಯೇ ನಿರ್ಗಮಿಸಿದರು.

ಈ ವಿವಾದ ಇತ್ಯರ್ಥಕ್ಕಾಗಿ ಪಂಚ ನ್ಯಾಯಾಧೀಶರನ್ನು ಒಳಗೊಂಡ ಹೊಸ ಪೀಠ ರಚನೆಯಾಗಲಿದೆ. ಆ ಪೀಠವು ಜ.29ರಿಂದ ವಿಚಾರಣೆ ಆರಂಭಿಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ಹೇಳಿದರು.

ಈ ಪ್ರಕರಣದ ವಿಚಾರಣೆಗಾಗಿ ತ್ರಿ ಸದಸ್ಯ ಪೀಠವೊಂದು ರಚನೆಯಾಗಲಿದೆ ಎಂದು ಸಿಜೆ ಅವರು ಈ ಹಿಂದೆ ಹೇಳಿದ್ದರು. ಆದರೆ ಅವರು ಪಂಚ ಸದಸ್ಯರ ಪೀಠವೊಂದನ್ನು ರಚಿಸಿದ್ದಾರೆ ಎಂಬ ಅಂಶವನ್ನು ಸಹ ಹಿರಿಯ ವಕೀಲ ಧವನ್ ನ್ಯಾಯಾಲಯದಲ್ಲಿ ಹೇಳಿದರು.

ಪಂಚ ನ್ಯಾಯಮೂರ್ತಿಗಳ ಪೀಠ ರಚನೆ ಬಗ್ಗೆ ನ್ಯಾಯಾಂಗ ಆದೇಶ ಹೊರಡಿಸುವ ಅಗತ್ಯವಿದೆ ಎಂದು ರಾಜೀವ್ ಧವನ್ ನ್ಯಾಯಾಲಯಕ್ಕೆ ನಿವೇದಿಸಿಕೊಂಡರು.
ಯಾವುದೇ ಪೀಠವು ಇಬ್ಬರು ನ್ಯಾಯಮೂರ್ತಿಗಳನ್ನು ಒಳಗೊಂಡಿರಬೇಕೆಂದು ಸುಪ್ರೀಂಕೋರ್ಟ್ ನಿಯಮಗಳು ಕಡ್ಡಾಯಗೊಳಿಸಿದೆ. ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ರಚಿಸುವುದರಲ್ಲಿ ತಪ್ಪೇನೂ ಇಲ್ಲ ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು.

ಸಿಜೆಐ ರಂಜನ್ ಗೊಗಯ್ ಕಳೆದ ಎರಡು ದಿನಗಳ ಹಿಂದಷ್ಟೇ ಈ ಪ್ರಕರಣದ ವಿಚಾರಣೆಗಾಗಿ ಸಾಂವಿಧಾನಿಕ ಪೀಠ ರಚನೆ ಮಾಡಿದ್ದರು. ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್.ಎ.ಬೊಬ್ಡೆ, ಎನ್.ವಿ.ರಮಣ, ಯು.ಯು.ಲಲಿತ್ ಮತ್ತು ಟಿ.ವೈ.ಚಂದ್ರಚೂಡ್ ಅವರುಗಳಿದ್ದು, ಇಂದು ವಿಚಾರಣೆ ನಡೆಯಬೇಕಿತ್ತು.

ಅಯೋಧ್ಯೆಯಲ್ಲಿನ 2.77 ಎಕರೆ ಜಾಗಕ್ಕೆ ಸಂಬಂಧಿಸಿದ ವಿವಾದ ಇದಾಗಿದೆ. 2010ರಲ್ಲಿ ಅಲಹಾಬಾದ್ ಹೈಕೋರ್ಟ್ ಈ ಸ್ಥಳವನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರ ಮತ್ತು ರಾಮ ಲಲ್ಲಾ-ಮೂವರು ಕಕ್ಷಿದಾರರಿಗೆ ಸಮನಾಗಿ ಹಂಚಿಕೆ ಮಾಡಿದೆ. ಇದನ್ನು ಪ್ರಶ್ನಿಸಿ ಒಟ್ಟು 14 ಅರ್ಜಿಗಳು ಸುಪ್ರೀಂಕೋರ್ಟ್‍ಗೆ ಸಲ್ಲಿಕೆಯಾಗಿವೆ.

ಜ.29ರಿಂದ ಹೊಸ ಪೀಠವು ಈ ವಿವಾದದ ವಿಚಾರಣೆ ನಡೆಸಲಿದ್ದು, ಕುತೂಹಲ ಕೆರಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ