ತಲ್ವಾರ್ ದಂಪತಿಗೆ ಮತ್ತೆ ಸಂಕಷ್ಟ: ಸಿಬಿಐ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಸಮ್ಮತಿ

ನವದೆಹಲಿ:ಆ-10: ಪುತ್ರಿ ಆರುಷಿ ಮತ್ತು ಹೇಮ್​ರಾಜ್​ ಜೋಡಿ ಕೊಲೆ ಪ್ರಕರಣದಲ್ಲಿ ದಂತವೈದ್ಯ ದಂಪತಿ ರಾಜೇಶ್​ ತಲ್ವಾರ್​ ಮತ್ತು ನೂಪುರ್​ ತಲ್ವಾರ್​ ಅವರಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.

ಹತ್ಯೆ ಪ್ರಕರಣದಲ್ಲಿ ತಲ್ವಾರ್​ ದಂಪತಿ ನಿರ್ದೋಷಿಗಳು ಎಂದು ಅಲಹಾಬಾದ್​ ಹೈಕೋರ್ಟ್​ ನೀಡಿದ್ದ ತೀರ್ಪು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಗೆ ಸುಪ್ರೀಂ ಕೋರ್ಟ್​ ಸಮ್ಮತಿ ನೀಡಿದೆ. ಸಿಬಿಐ ಸಲ್ಲಿಸಿರುವ ಮೇಲ್ಮನವಿಯ ಜೊತೆಗೆ ಮೃತ ಹೇಮರಾಜ್​ ಪತ್ನಿ ಕಮಲಾ ಬಂಜದೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮಾಡುವುದಾಗಿಯೂ ನ್ಯಾಯಮೂರ್ತಿ ರಂಜನ್ ಗೋಗೊಯ್ ನೇತೃತ್ವದ ಸುಪ್ರೀಂ ಪೀಠ ತಿಳಿಸಿದೆ. ಈ ಹಿನ್ನೆಲೆಯಲ್ಲಿ ತಲ್ವಾರ್​ ದಂಪತಿಗೆ ಸುಪ್ರೀಂ ಕೋರ್ಟ್​ ನೋಟಿಸ್ ಸಹ​ ಜಾರಿ ಮಾಡಿದೆ.

ಆರುಷಿ ಹಾಗೂ ಹೇಮರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯ 2013ರಲ್ಲಿ ದಂಪತಿಯನ್ನು ದೋಷಿಗಳೆಂದು ಘೋಷಿಸಿ ಜೀವಾವಧಿ ಶಿಕ್ಷೆ ನೀಡಿತ್ತು. ಆದರೆ ಕಳೆದ ವರ್ಷ ಅಕ್ಟೋಬರ್ 12ರಂದು ಅಲಹಬಾದ್ ಹೈಕೋರ್ಟ್ ತಲ್ವಾರ್​ ದಂಪತಿಯನ್ನು ಖುಲಾಸೆಗೊಳಿಸಿತ್ತು. ಈ ಹಿನ್ನಲೆಯಲ್ಲಿ ದಂಪತಿಗಳು ಬಿಡುಗಡೆಯಾಗಿದ್ದರು.

ತಲ್ವಾರ್​ ದಂಪತಿಯ ಪುತ್ರಿ 13 ವರ್ಷದ ಆರುಷಿ 2008ರಲ್ಲಿ ನೋಯ್ಡಾದ ತನ್ನ ಮನೆಯ ಕೊಠಡಿಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಮರುದಿನ ಮನೆಯ ಮಹಡಿ ಮೇಲೆ ಮನೆಗೆಲಸಗಾರ ನೇಪಾಳ ಮೂಲದ ಹೇಮರಾಜ್​ನ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನೋಯ್ಡಾದಲ್ಲಿ 2008ರಲ್ಲಿ ನಡೆದಿದ್ದ ಈ ಜೋಡಿ ಕೊಲೆ ದೇಶವನ್ನು ಬೆಚ್ಚಿಬೀಳಿಸಿತ್ತು.

Supreme Court,Admits CBI Appeal, Against Aarushi Talwar’s Parents’

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ