ಹಾಲಿ, ಮಾಜಿ ಶಾಸಕರು, ಸಂಸದರ ವಿರುದ್ಧದ 4,122 ಪ್ರಕರಣಗಳ ವಿಚಾರಣೆ ಬಾಕಿ: ಸುಪ್ರೀಂ ಗೆ ವರದಿ ಸಲ್ಲಿಕೆ

ನವದೆಹಲಿ: ಮಾಜಿ ಹಾಗೂ ಹಾಲಿ ಶಾಸಕರು,ಸಂಸದರುಗಳಿಗೆ ಸಂಬಂಧಿಸಿದ ಒಟ್ಟು 4,122 ಪ್ರಕರಣಗಳ ವಿಚಾರಣೆ ದೇಶದಾದ್ಯಂತ ಬಾಕಿ ಉಳಿದಿವೆ ಎಂಬ ವಿವರಗಳನ್ನೊಳಗೊಂಡ ವರದಿಯು ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿದೆ.

ಹಾಲಿ ಹಾಗೂ ಮಾಜಿ ಶಾಸಕರು, ಸಂಸದರ ವಿರುದ್ಧದ ಪ್ರಕರಣಗಳನ್ನು ಒಂದುವರ್ಷದೊಳಗಾಗಿ ವಿಚಾರಣೆ ನಡೆಸಬ್ಬೇಕು ಎಂದು ಸೂಪ್ರೀಂ ಹೈಕೋರ್ಟ್ ಗಳಿಗೆ ಆದೇಶ ನೀಡಿದ್ದರೂ ಈ ಕುರಿತು ಯಾವುದೇ ವಿಚಾರಣೆ ನಡೆಸಲಾಗಿಲ್ಲ. ಈ ಮೂಲಕ ಸುಪ್ರಿಂ ನೀಡಿದ್ದ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ಹಿರಿಯ ವಕೀಲ ವಿಜಯ್‌ ಹನ್ಸಾರಿಯಾ ಅವರು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.

ವಕೀಲ ಹಾಗೂ ಬಿಜೆಪಿ ನಾಯಕ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ, ಹನ್ಸಾರಿಯಾ ಅವರನ್ನು ಅಮಿಕಸ್‌ ಕ್ಯೂರಿ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲ)ಯನ್ನಾಗಿ ನೇಮಿಸಿತ್ತು. ಅವರು ಶಾಸಕರು, ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ತಿಳಿಸಿದ್ದರು.

ಒಟ್ಟು ಪ್ರಕರಣಗಳಲ್ಲಿ 2,324 ಪ್ರಕರಣಗಳು ಹಾಲಿ ಶಾಸಕರು ಹಾಗೂ ಸಂಸದರ ವಿರುದ್ಧದವುಗಳಾಗಿವೆ. ಆಚ್ಚರಿಯ ಸಂಗತಿಯೆಂದರೆ ಕೆಲ ಪ್ರಕರಣಗಳು ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಇತ್ಯರ್ಥವಾಗದೇ ಉಳಿದಿವೆ ಎಂದು ವಕೀಲ ವಿಜಯ್‌ ಹನ್ಸಾರಿಯಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ಉನ್ನತ ನ್ಯಾಯಾಲಯಗಳಲ್ಲಿ ತಡೆ ನೀಡಲಾಗಿರುವುದು ವಿಚಾರಣೆ ವಿಳಂಬವಾಗಲು ಕಾರಣ ಎನ್ನಲಾಗಿದೆ.

ಉತ್ತರ ಪ್ರದೇಶದ ಹಾಲಿ ಹಾಗೂ ಮಾಜಿ ಶಾಸಕರ ವಿರುದ್ಧ ಒಟ್ಟು 992 ಪ್ರಕರಣಗಳು ಬಾಕಿಯಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಒರಿಶಾ, ತಮಿಳುನಾಡು, ಕೇರಳ, ಬಿಹಾರ, ಮಹಾರಾಷ್ಟ್ರ ರಾಜ್ಯಗಳು ನಂತರದ ಸ್ಥಾನಗಳಲ್ಲಿದ್ದು, ಕ್ರಮವಾಗಿ 331, 321, 312, 304, 303 ಪ್ರಕರಣಗಳು ಬಾಕಿ ಇವೆ. ಇದೇ ಮಾದರಿಯ 161 ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗಿವೆ. ಅದರಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಸಂಸದರ ವಿರುದ್ಧ 2 ಮತ್ತು ಶಾಸಕರ ವಿರುದ್ಧ 95 ಪ್ರಕರಣಗಳು ಸೇರಿವೆ.

ಜೀವಾವಧಿ ಶಿಕ್ಷೆಗೆ ಒಳಪಡುವಂತಹ ಗಂಭೀರ ಪ್ರಮಾಣದ ಅಪರಾಧಗಳಲ್ಲಿ ಭಾಗಿಯಾಗಿರುವ ಶಾಸಕರು, ಸಂಸದರಿಗೆ ಶಿಕ್ಷೆ ಜಾರಿ ಮಾಡಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಅಮಿಕಸ್‌ ಕ್ಯೂರಿ ಸಲಹೆ ನೀಡಿದ್ದರು.

ದೇಶದ ಎಲ್ಲ ರಾಜ್ಯಗಳ ಹೈಕೋರ್ಟ್‌ಗಳಿಂದ ಮಾಹಿತಿ ಪಡೆದು ವರದಿ ತಯಾರಿಸಿರುವ ಅಮಿಕಸ್‌ ಕ್ಯೂರಿ ದೇಶದ ಒಟ್ಟು 724 ಜಿಲ್ಲೆಗಳ ಪೈಕಿ 440 ಜಿಲ್ಲೆಗಳಲ್ಲಿ ಪ್ರಕರಣಗಳು ಬಾಕಿ ಉಳಿದಿರುವುದನ್ನು ಉಲ್ಲೇಖಸಿದ್ದಾರೆ.

ಹಾಲಿ ಹಾಗೂ ಮಾಜಿ ಶಾಸಕರು, ಸಂಸದರ ವಿರುದ್ಧದ ಪ್ರಕರಣಗಳ ಸಂಖ್ಯೆ ಹಾಗೂ ಅಪರಾಧಗಳ ಪ್ರಮಾಣ ಒಂದೇ ಆಗಿಲ್ಲ. ಕೆಲವರ ವಿರುದ್ಧ ಒಂದೇ ರೀತಿಯ ಹಲವು; ಪ್ರಕರಣಗಳು ದಾಖಲಾಗಿವೆ. ಶಾಸಕರು, ಸಂಸದರ ವಿರುದ್ಧದ ಪ್ರಕರಣಗಳು ದಾಖಲಾದ ನಂತರ ಒಂದು ವರ್ಷದ ಒಳಗಾಗಿ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಮಾರ್ಚ್‌ 10, 2014ರಂದು ಸುಪ್ರೀಂ ತೀರ್ಪು ನೀಡಿತ್ತು. ಆ ಸಂಬಂಧ ಹೈಕೋರ್ಟ್‌ಗಳಿಂದ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ’ ಎಂದು ದೂರಿದ್ದಾರೆ.

12 ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆಯಾದರೂ ಬಾಕಿ ಉಳಿದುಕೊಂಡಿರುವ ಪ್ರಕರಣಗಳ ಆಧಾರದಲ್ಲಿ ಅವುಗಳನ್ನು ಏಕರೂಪವಾಗಿ ಸ್ಥಾಪಿಸಲ್ಪಟ್ಟಿಲ್ಲ.ಮಧ್ಯಂತರ ತಡೆ ನೀಡಲಾಗಿರುವ ಪ್ರಕರಣಗಳ ವಿಚಾರಣೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಹೈಕೋರ್ಟ್‌ಗಳಿಗೆ ನಿರ್ದೇಶಿಸಬೇಕು ಎಂದು ಸಲಹೆ ನೀಡಿದ್ದಾರೆ.

4122 cases pending, against MPs and MLAs, Supreme Court

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ