ಮುಂಗಾರು ಅಧಿವೇಶನದ ಏಳನೇ ದಿನದಂದೋ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಗದ್ದಲ

ನವದೆಹಲಿ, ಜು.28- ಮುಂಗಾರು ಅಧಿವೇಶನದ ಏಳನೇ ದಿನದಂದು ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಗದ್ದಲ ಮುಂದುವರೆದಿದ್ದರಿಂದ ಕಲಪಾ ಅಸ್ತವ್ಯಸ್ಥವಾಗಿದ್ದು, ಬಹಳಷ್ಟು ವಿಧೇಯಕಗಳು ಚರ್ಚೆಯಾಗದೆ ಸಂಸತ್‍ನಲ್ಲಿ ಅಂಗೀಕಾರಗೊಂಡಿವೆ. ಈ ನಡುವೆ ಪ್ರತಿಪಕ್ಷಗಳ ಸದಸ್ಯರು ನಮ್ಮ ಆಟ ಈಗ ಶುರು ಎಂಬ ಘೋಷಣೆ ಮೊಳಗಿಸಿದ್ದಾರೆ.

ಲೋಕಸಭೆ ಮತ್ತು ರಾಜ್ಯಸಭೆ ಕಲಾಪ ಆರಂಭಕ್ಕೂ ಮುನ್ನಾ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರು ಪ್ರತ್ಯೇಕ ಸಭೆ ನಡೆಸಿ ಚರ್ಚಿಸುವ ಮೂಲಕ ತಮ್ಮದೇ ಆದ ರಣತಂತ್ರ ರೂಪಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಸೇರಿ ಅನೇಕರು ಸಭೆ ನಡೆಸಿದರು. ಅತ್ತ ಪ್ರತಿಪಕ್ಷದ ಪಾಳೆಯದಲ್ಲಿ ರಾಹುಲ್‍ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಸಭೆ ನಡೆಸಿ ಸಂಸತ್‍ನ ಅಧಿವೇಶನದಲ್ಲಿ ಅನುಸರಿಸಬೇಕಾದ ತಂತ್ರಗಾರಿಕೆ ಕುರಿತು ಸಮಾಲೋಚನೆ ನಡೆಸಿದರು.

ಬಳಿಕ ಉಭಯ ಸದನಗಳು ಸಮಾವೇಶಗೊಂಡವಾದರೂ ಕಲಾಪ ನಡೆಯದೆ ಹಲವಾರು ಬಾರಿ ಮುಂದೂಡಿಕೆಯಾಯಿತು. ಪ್ರತಿಪಕ್ಷಗಳು ನಮ್ಮ ಆಟ ಶುರು ಎಂದು ಘೋಷಣೆ ಕೂಗಿದರೆ, ಆಡಳಿತ ಪಕ್ಷ ಕಲಾಪದಲ್ಲಿ ಪ್ರತಿಪಕ್ಷಗಳ ವರ್ತನೆ ಬಗ್ಗೆ ಜನರಿಗೆ ಮಾಹಿತಿ ನೀಡುವುದಾಗಿ ಎಚ್ಚರಿಸಿದೆ.

ಉಭಯ ಸದನಗಳಲ್ಲೂ ಪೆಗಾಸಸ್ ಬೇಹುಗಾರಿಕೆ, ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ತಿದ್ದುಪಡಿ, ರೈತರ ಪ್ರತಿಭಟನೆ, ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಸೇರಿದಂತೆ ಅನೇಕ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಗದ್ದಲ ನಡೆಸಿವೆ. ಗದ್ದಲದ ನಡುವೆಯೂ ಸರ್ಕಾರ ಹಲವಾರು ಮಸೂದೆಗಳನ್ನು ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ.

ಕಾಂಗ್ರೆಸ್‍ನ ಸಂಸದ ರಿಪುನ ಬೊರಾ ಅವರು ರಾಜ್ಯಸಭೆಯಲ್ಲಿ ನೋಟಿಸ್ ನೀಡಿ, ಎಲ್ಲಾ ಕಲಾಪಗಳನ್ನು ಬದಿಗಿರಿಸಿ ಅಸ್ಸಾಂ ಮತ್ತು ಮಿಜೋರಾಂ ನಡುವಿನ ಗಡಿ ಸಂಘರ್ಷವನ್ನು ಚರ್ಚೆಗೆ ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಿದ್ದರು. ಆರು ಮಂದಿ ಪೊಲೀಸರ ಸಾವಿಗೆ ಕಾರಣವಾದ ಸಂಘರ್ಷದ ಕುರಿತು ಚರ್ಚಿಸುವುದು ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದ್ದರು.

ರಾಜ್ಯಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ಎಂ.ವಿ.ವೆಂಕಯ್ಯ ನಾಯ್ಡು ಅವರು, ವಿಶ್ವಸಂಸ್ಥೆಯ ಶಿಕ್ಷಣ, ವಿಜ್ಞಾನ ಮತ್ತು ಸಂಸ್ಕøತಿ ಸಂಘಟನೆಯು ಗುಜರಾತ್‍ನ ರಾಣಾ ಕಚ್‍ನಲ್ಲಿರುವ ಹರಪ್ಪ ಯುಗದ ಧೋಲವಿರಾ ನಗರವನ್ನು ವಿಶ್ವ ಪಾರಂಪರಿಕ ಕ್ಷೇತ್ರಗಳ ಪಟ್ಟಿಗೆ ಸೇರಿಸಿದೆ ಎಂದು ತಿಳಿಸಿದರು.

ಬಳಿಕ ಹಲವು ಕಾಗದ ಪತ್ರಗಳ ಮಂಡನೆ ಮಾಡಲಾಯಿತು. ಶೂನ್ಯವೇಳೆ ಕೈಗೆತ್ತಿಕೊಳ್ಳುತ್ತಿದ್ದಂತೆ ರಾಜ್ಯಸಭೆ ಸದಸ್ಯರು ಗದ್ದಲ ಆರಂಭಿಸಿದರು. ಪೆಗಾಸಸ್ ಬೇಹುಗಾರಿಕೆ, ರೈತರ ಪ್ರತಿಭಟನೆಗಳನ್ನು ಪ್ರಸ್ತಾಪಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಪಕ್ಷದ ಸದಸ್ಯರು ಭಿತ್ತಿ ಪತ್ರಗಳನ್ನು ಪ್ರದರ್ಶನ ಮಾಡಿದಾಗ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಸಿಟ್ಟಾದರು. ಅಧಿವೇಶನದ ಒಳಗೆ ಯಾವುದೇ ಭಿತ್ತಿಪತ್ರಗಳ ಪ್ರದರ್ಶನಕ್ಕೆ ಅವಕಾಶ ಇಲ್ಲ ಎಂದು ಆದೇಶಿಸಿದರು. ಜೊತೆಯಲ್ಲಿ ಶೂನ್ಯವೇಳೆಯಲ್ಲಿ ಜನಪರವಾದ ವಿಷಯಗಳ ಚರ್ಚೆಗೆ ಹೆಸರು ನೀಡಿರುವ ಸದಸ್ಯರನ್ನು ಮಾತನಾಡಲು ಆಹ್ವಾನಿಸಿದರು. ಆದರೆ ಗದ್ದಲ ನಿಯಂತ್ರಣಕ್ಕೆ ಬರಲಿಲ್ಲ. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಘೋಷಣೆ ಕೂಗುವ ಜೊತೆಗೆ ನಮ್ಮ ಆಟ ಶುರು ಎಂದು ಕೂಗುತ್ತಿದ್ದರು.

ಸಚಿವರಾದ ಹರದೀಪ್ ಸಿಂಗ್ ಪುರಿ, ಭೂಪೆಂದ್ರ ಯಾದವ್ ಮತ್ತು ಜೋತಿರಾಧಿತ್ಯ ಸಿಂಧ್ಯಾ ಅವರು ತಮ್ಮ ಇಲಾಖೆಗಳ ಕುರಿತು ಹೇಳಿಕೆ ನೀಡಿದರು.
ಕಾರ್ಮಿಕ ಇಲಾಖೆ ಭೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ ಅಡಿ ಕಾರ್ಮಿಕರ ವಿಮಾ ಸೌಲಭ್ಯ ಅರ್ಹತಾ ಮಿತಿಗೆ ರಿಯಾಯಿತಿ ನೀಡಿರುವುದನ್ನು ತಿಳಿಸಲಾಯಿತು. ನೇವಿಗೇಷನ್ ಮಸೂದೆಯ ಬದಲಾವಣೆ ವಿಧೇಯಕ ಮಂಡನೆಯಾಯಿತು.

ಇಲ್ಲಿನ ವಿದ್ಯಮಾನಗಳು ಕಡ್ಡಾಯವಾಗಿ ಜನರಿಗೆ ತಿಳಿಯಬೇಕು ಎಂದು ಹೇಳಿದ ವೆಂಕಯ್ಯ ನಾಯ್ಡು ಅವರು, ಕಲಾಪವನ್ನು 12 ಗಂಟೆಗೆ ಮುಂದೂಡಿದರು.

ಅತ್ತ ಲೋಕಸಭೆಯಲ್ಲೂ ಇದೇ ವಿಷಯಗಳಿಗೆ ಸಂಬಂಧಿಸಿದಂತೆ ಗದ್ದಲ ಮುಂದುವರೆಯಿತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸಾಲ ತೀರುವಳಿ ಮತ್ತು ದಿವಾಳಿತನದ ವಿಧೇಯಕ, ಅಧಿಕೃತ ಪಾವತಿ ಮತ್ತು ಸೇವಾದೃಷ್ಟಿಯಿಂದ ಸೂಕ್ತ ನಿಧಿ ಹೂಡಿಕೆ ಕುರಿತ ಮಸೂದೆಯನ್ನು ಮಂಡಿಸಿದರು. ಇಲ್ಲೂ ಪ್ರತಿಪಕ್ಷಗಳು ಗದ್ದಲ ಮುಂದುವರೆಸಿದ್ದರಿಂದ ಮಧ್ಯಾಹ್ನದವರೆಗೂ ಕಲಾಪವನ್ನು ಮುಂದೂಡಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ