ತಿರುವನಂತಪುರಂ: ಶಬರಿಮಲೆಯತ್ತ ಸಾಗುತ್ತಿದ್ದ ಹಿಂದೂ ಐಕ್ಯವೇದಿ ರಾಜ್ಯಾಧ್ಯಕ್ಷೆ ಕೆ ಪಿ ಶಶಿಕಲಾ ಅವರನ್ನು ಕೇರಳ ಪೊಲೀಸರು ಬಂಧಿಸಿದ್ದು, ಇದನ್ನು ವಿರೋಧಿಸಿ ಹಿಂದೂಪರ ಸಂಘಟನೆಗಳು ಇಂದು ಕೇರಳ ಬಂದ್ ಗೆ ಕರೆ ನೀಡಿದ್ದರಿಂದ ಸಂಜೆ ವರೆಗೂ ಬಂದ್ ವಾತಾವರಣ ನಿರ್ಮಾಣವಾಗಿತ್ತು.
ಹಿಂದೂ ಐಕ್ಯವೇದಿಯ ರಾಜ್ಯಾಧ್ಯಕ್ಷರಾದ ಕೆ ಪಿ ಶಶಿಕಲಾ ಅವರನ್ನು ಬಂಧಿಸಿರುವ ಕೇರಳ ಪೊಲೀಸರ ನಡೆಯನ್ನು ಖಂಡಿಸಿ ಶಬರಿಮಲೆ ಕ್ರಿಯಾ ಸಮಿತಿ ಇಂದು ಕೇರಳದಾದ್ಯಂತ ಬಂದ್ ಗೆ ಕರೆ ನೀಡಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 6ಗಂಟೆಯವರೆಗೂ ಬಂದ್ ಗೆ ಬೆಂಬಲ ವ್ಯಕ್ತವಾಗಿದ್ದು, ಕೇರಳದಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಬ್ದಗೊಂಡಿದ್ದು,ಯಾವುದೇ ಬಸ್ಸುಗಳು ರಸ್ತೆಗಿಳಿದಿಲ್ಲ. ಅಂಗಡಿ ಮುಮ್ಗಟ್ಟುಗಳು ಕೂದ ಸಂಪೂರ್ಣ ಬಂದ್ ಆಗಿತ್ತು.
ಶಬರಿಮಲೆಯಲ್ಲಿ ಪ್ರತಿಭಟನೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದೇವಾಲಯದ ಸುತ್ತಮುತ್ತ ಪೊಲೀಸರು ನಿಷೇಧಾಜ್ಞೆ ವಿಧಿಸಿದ್ದರು. ಇದನ್ನು ಉಲ್ಲಂಘಿಸಿ ಸನ್ನಿಧಾನಂಗೆ ಆಗಮಿಸಿದ ಹಿನ್ನಲೆಯಲ್ಲಿ ಶಶಿಕಲಾ ಅವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮುಂಜಾನೆ ಎರಡು ಗಂಟೆ ಸುಮಾರಿನಲ್ಲಿ ಮರಕ್ಕೊಟ್ಟಂ ತಲುಪಿದ್ದ ಶಶಿಕಲಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಶಶಿಕಲಾ ತನಗೆ 50 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದ್ದು ಸ್ವಾಮಿಯ ದರ್ಶನಕ್ಕೆ ಅವಕಾಶ ಮಾಡಿ ಕೊಡಿ ಎಂದು ಪೊಲೀಸರ ಬಳಿ ಕೇಳಿಕೊಂಡಿದ್ದಾರೆ. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪೊಲೀಸರು ಶಶಿಕಲಾ ಅವರು ದೇವಸ್ಥಾನದ ಬಳಿ ತೆರಳಿ ಪ್ರತಿಭಟನೆ ಮಾಡುತ್ತಾರೆ ಎಂಬ ಶಂಕೆಯಿಂದ ಅವರನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ.
Sabarimala row,K P sasikala, arrested,kerala Bandh