ಬೆಂಗಳೂರು:ಜು-೨: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಮೊದಲ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಜಂಟಿ ಅಧಿವೇಶನದಲ್ಲಿ ಇದೇ ಮೊದಲ ಬಾರಿಗೆ ವಿಪಕ್ಷ ಸ್ಥಾನದಲ್ಲಿ 104 ಶಾಸಕರು ಕೂರುತ್ತಿದ್ದಾರೆ. ಹಾಗೇ 37 ಶಾಸಕರು ಆಡಳಿತ ನಡೆಸುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಮೈತ್ರಿ ಸರ್ಕಾರದ ಮೊದಲ ಅಧಿವೇಶನದಲ್ಲಿ ಭಾಗಿ ಆಗುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ. ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇವೆ ಎಂದಿದ್ದಾರೆ. ಉತ್ತಮ ಕೆಲಸಗಳಿಗೆ ಪ್ರತಿಪಕ್ಷವಾಗಿ ನಾವು ಸಹಕಾರ ನೀಡುತ್ತೇವೆ. ಬಜೆಟ್ನಲ್ಲಿ ಏನು ಯೋಜನೆ ಘೋಷಣೆ ಮಾಡುತ್ತಾರೆ ಕಾದು ನೋಡಬೇಕು ಎಂದರು.
ನಮ್ಮ ಹೋರಾಟದ ಬಗ್ಗೆ ಈಗಲೇ ಏನನ್ನೂ ಮಾತನಾಡುವುದಿಲ್ಲ. ಇಂದು ಸಂಜೆ 6 ಗಂಟೆಗೆ ಬಿಜೆಪಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇವೆ. ಅಲ್ಲಿ ಎಲ್ಲವನ್ನೂ ಚರ್ಚೆ ಮಾಡುತ್ತೇವೆ ಎಂದರು.
ಹನ್ನೊಂದು ವರ್ಷಗಳ ಬಳಿಕ ಬಿ.ಎಸ್.ಯಡಿಯೂರಪ್ಪ ಮತ್ತೆ ವಿಪಕ್ಷ ನಾಯಕರಾಗಿ ಅಧಿವೇಶನದಲ್ಲಿ ಭಾಗಿಯಾಗುತ್ತಿದ್ದು, ಇದಕ್ಕೂ ಮುಂಚೆ ವಿಧಾನಸೌಧದಲ್ಲಿ ವಿಪಕ್ಷ ನಾಯಕರ ಕೊಠಡಿಗೆ ಪುರೋಹಿತರಿಂದ ಪೂಜೆ ಮಾಡಿಸಿದರು.
Congress-JDS Session,BJP,BS Yadiyurappa