ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಅತ್ಯಾಪ್ತರ್ಯಾರು ಈಗ ಯಡಿಯೂರಪ್ಪನವರ ಸಾಮೀಪ್ಯದಲ್ಲಿಲ್ಲ

ಬೆಂಗಳೂರು,ಜು.24- ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಅತ್ಯಾಪ್ತರ್ಯಾರು ಈಗ ಯಡಿಯೂರಪ್ಪನವರ ಸಾಮೀಪ್ಯದಲ್ಲಿಲ್ಲ. ಹಿಂದೆ ಗಟ್ಟಿ ನಿರ್ಧಾರ ಕೈಗೊಂಡ ವೇಳೆ ಸಿಕ್ಕ ಬೆಂಬಲ ಈಗ ಕಾಣದಿರುವುದು ಯಡಿಯೂರಪ್ಪನವರ ಮೌನಕ್ಕೆ ಕಾರಣ ಎನ್ನಲಾಗುತ್ತಿದೆ.
ಹಾಗಾಗಿ ಮಾತನಾಡಲೂ ಆಗದೆ, ಮೌನವಾಗಿ ಇರಲೂ ಆಗದೆ ಚಡಪಡಿಸುತ್ತಾ ಕೂರುವಂತಾಗಿದೆ.

ಹೌದು, 2011 ರ ಜುಲೈ 31 ರಂದು ಹೈಕಮಾಂಡ್ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದ್ದರು. ರೇಸ್ ಕೋರ್ಸ್ ನಿವಾಸದಿಂದ ಸಂಪುಟ ಸಹೋದ್ಯೋಗಿಗಳು ಮತ್ತು ಶಾಸಕರ ತಂಡದೊಂದಿಗೆ ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದರು.

ಅಂದು ನೇರವಾಗಿ ಯಡಿಯೂರಪ್ಪ ಬೆಂಬಲಕ್ಕಿದ್ದ ಆಪ್ತರು ಇಂದು ಜೊತೆಗಿದ್ದರೂ ಹಿಂದಿನ ರೀತಿಯಲ್ಲಿ ಗಟ್ಟಿಯಾಗಿ ನಿಲ್ಲುತ್ತಿಲ್ಲ ಎಲ್ಲರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎನ್ನುತ್ತಿದ್ದಾರೆ.

ಅಂದು ಯಡಿಯೂರಪ್ಪ ರಾಜಕೀಯ ಜೀವನದಲ್ಲಿ ಮಹತ್ವದ ಬದಲಾವಣೆ ನಿರ್ಧಾರ ಪ್ರಕಟಿಸಿದ್ದರು. ಆಪ್ತ ಸಚಿವರು, ಬೆಂಬಲಿಗ ಶಾಸಕರು ತಮ್ಮೊಂದಿಗೆ ಬರುತ್ತಾರೆ ಎಂಬ ನಂಬಿಕೆಯಿಂದ ಪ್ರಾದೇಶಿಕ ಪಕ್ಷ ಕಟ್ಟಿದ್ದರು.

ಆದರೆ ಅಂದು ಯಡಿಯೂರಪ್ಪ ಹೆಜ್ಜೆಗೆ ಹೆಜ್ಜೆ ಹಾಕಿದ್ದು ಕೇವಲ ಧನಂಜಯ ಕುಮಾರ್, ಎಂ.ಡಿ.ಲಕ್ಷ್ಮೀನಾರಾಯಣ, ಸಿ.ಎಂ ಉದಾಸಿ, ಶೋಭಾ ಕರಂದ್ಲಾಜೆ ಮಾತ್ರ. ನಂತರ ರೇಣುಕಾಚಾರ್ಯ, ಬಿ.ಪಿ.ಹರೀಶ್ ಸೇರಿ ಕೆಲವೇ ಕೆಲವು ಶಾಸಕರು ಮಾತ್ರ.

ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಲು ನಿರ್ಧರಿಸುತ್ತಿದ್ದಂತೆ ಆಪ್ತ ಧನಂಜಯಕುಮಾರ್ ಅವರನ್ನು ಕೆಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. ನಂತರ ಹಾವೇರಿಯಲ್ಲಿ ಬೃಹತ್ ಸಮಾವೇಶ ಮಾಡಿ ಕೆಜೆಪಿ ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪ ಅಧಿಕಾರ ಸ್ವೀಕಾರ ಮಾಡಿದರು. ಅಂದು ಸಚಿವ ಸ್ಥಾನ ತೊರೆದು ಯಡಿಯೂರಪ್ಪನವರ ಹಿಂದೆ ಬಂದಿದ್ದು ಹಿರಿಯ ನಾಯಕ ಸಿ.ಎಂ.ಉದಾಸಿ ಮತ್ತು ಶೋಭಾ ಕರಂದ್ಲಾಜೆ ಮಾತ್ರ.

ಇನ್ನುಳಿದ ಸಚಿವರು ಬಿಎಸ್‍ವೈ ಜೊತೆ ಬರಲು ನಿರಾಕರಿಸಿ ಬಿಜೆಪಿಯಲ್ಲೇ ಉಳಿದುಕೊಂಡರು. ಆದರೆ ಎಂ.ಡಿ ಲಕ್ಷ್ಮೀನಾರಾಯಣ ಮಾತ್ರ ಯಡಿಯೂರಪ್ಪ ಬೆಂಬಲಕ್ಕೆ ನಿಂತರು.

ಕೆಜೆಪಿ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಧನಂಜಯ ಕುಮಾರ್, ಲಕ್ಷ್ಮೀನಾರಾಯಣ ನೋಡಿಕೊಂಡರೆ ರಾಜಕೀಯ ತಂತ್ರಗಾರಿಕೆಯನ್ನು ಸಿಎಂ ಉದಾಸಿ, ಶೋಭಾ ಕರಂದ್ಲಾಜೆ ನೋಡಿಕೊಂಡರು.

ಈ ನಾಲ್ವರು ನಾಯಕರೇ ಯಡಿಯೂರಪ್ಪನವರ ಬೆನ್ನಿಗೆ ನಿಂತು ಕೆಜೆಪಿಯನ್ನುಸಜ್ಜುಗೊಳಿಸಿದರು. ಚುನಾವಣೆಗಾಗಿ ಸಮಾವೇಶಗಳ ಆಯೋಜನೆ, ಚುನಾವಣಾ ಪ್ರಚಾರ ಕಾರ್ಯ ನೋಡಿಕೊಂಡರು. ಇದೆಲ್ಲದರ ಪರಿಣಾಮ ಕೇವಲ 6 ಸ್ಥಾನ ಗೆದ್ದರೂ ಶೇ.9ರಷ್ಟು ಮತಗಳನ್ನು ಸೆಳೆದು ಬಿಜೆಪಿಯನ್ನು ಸೋತು ಸುಣ್ಣವಾಗುವಂತೆ ಮಾಡಿತು.

ಆದರೆ ಇಂದಿನ ಸ್ಥಿತಿ ಬೇರೆಯದ್ದೇ ಇದೆ. ಅಂದು ಜೊತೆಗಿದ್ದು ಕಡೆ ಕ್ಷಣದಲ್ಲಿ ಕೆಜೆಪಿಗೆ ಹೋಗದ ಎಲ್ಲರೂ ಇಂದು ಬಿಜೆಪಿಯಲ್ಲಿಯೇ ಇದ್ದಾರೆ. ಯಡಿಯೂರಪ್ಪ ಆಪ್ತ ಬಣ ಎಂದೇ ಗುರುತಿಸಿಕೊಂಡಿದೆ. ಆದರೆ ಹಿಂದೆ ಸಿಕ್ಕ ಅತ್ಯಾಪ್ತರ ಬೆಂಬಲ ಈಗ ಯಡಿಯೂರಪ್ಪನವರಿಗೆ ಇಲ್ಲವಾಗಿದೆ.

ಧನಂಜಯ ಕುಮಾರ್, ಸಿಎಂ ಉದಾಸಿ ನಿಧನರಾಗಿದ್ದಾರೆ. ಲಕ್ಷ್ಮೀನಾರಾಯಣ ಕಾಂಗ್ರೆಸ್ ಸೇರಿದ್ದಾರೆ. ಶೋಭಾ ಕರಂದ್ಲಾಜೆ ಎರಡನೇ ಬಾರಿ ಸಂಸದೆಯಾದ ನಂತರ ಯಡಿಯೂರಪ್ಪ ಜೊತೆ ಅಂತರ ಕಾಯ್ದುಕೊಂಡಿದ್ದಾರೆ. ಅಲ್ಲದೆ ಈಗ ಕೇಂದ್ರದಲ್ಲಿ ಸಚಿವರೂ ಆಗಿದ್ದಾರೆ. ಹಾಗಾಗಿ ಅತ್ಯಾಪ್ತರ ಬಳಗ ಯಡಿಯೂರಪ್ಪ ಜೊತೆಯಲ್ಲಿ ಇಲ್ಲದಂತಾಗಿದೆ.

ಇಂದು ರಾಜೀನಾಮೆ ಕಾಲ ಸನ್ನಿಹಿತವಾದರೂ ಆಪ್ತರ ಬಳಿಯೂ ಯಡಿಯೂರಪ್ಪ ರಾಜಕೀಯ ನಿರ್ಧಾರಗಳ ಕುರಿತು ಸ್ಪಷ್ಟವಾಗಿ ಏನನ್ನೂ ಮಾತನಾಡುತ್ತಿಲ್ಲ. ಗಟ್ಟಿ ನಿರ್ಧಾರಕ್ಕೆ ಮುಂದಾಗದೆ ಅಸಮಾಧಾನ ವ್ಯಕ್ತಪಡಿಸದೆ ಅವರನ್ನು ಮೌನವಾಗಿಸಿಬಿಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ