ಬೆಂಗಳೂರು, ಜೂ.18- ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ರೈತರ ಸಾಲ ಮನ್ನಾ ಮಾಡಲೇಬೇಕು. ಮುಂದಿನ ಬಜೆಟ್ನಲ್ಲಿ ಸಾಲ ಮನ್ನಾ ಆಗದೇ ಇದ್ದರೆ ಬಿಜೆಪಿ ಹೋರಾಟಕ್ಕಿಳಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ 24 ಗಂಟೆಯೊಳಗಾಗಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಈಗ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಾಗಿದ್ದು, ಎಲ್ಲಾ ನಿರ್ಧಾರಕ್ಕೂ ಕಾಂಗ್ರೆಸ್ ಅನುಮತಿ ಅಗತ್ಯ ಎಂದು ಅಪ್ಪ-ಮಕ್ಕಳು ಕಾರಣ ಹೇಳುತ್ತಿದ್ದಾರೆ.
ಕಾಂಗ್ರೆಸ್ ಬೆಂಬಲ ಪಡೆಯುವುದಕ್ಕೂ ಮುನ್ನ ಜೆಡಿಎಸ್ ಪ್ರಣಾಳಿಕೆ ಭರವಸೆಗಳನ್ನು ಈಡೇರಿಸಲು ಒಪ್ಪಿದರೆ ಮಾತ್ರ ಮುಖ್ಯಮಂತ್ರಿಯಾಗುತ್ತೇನೆ ಎಂದು ಕುಮಾರಸ್ವಾಮಿ ಷರತ್ತು ವಿಧಿಸಬೇಕಿತ್ತು. ಆದರೆ, ಕುರ್ಚಿಯ ಆಸೆಗೆ ತರಾತುರಿಯಲ್ಲಿ ಮೈತ್ರಿ ಸರ್ಕಾರ ರಚನೆ ಮಾಡಿದರು. ಈಗ ಭರವಸೆಗಳನ್ನು ಈಡೇರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದರು.
ಒಂದೆಡೆ ಸಿದ್ದರಾಮಯ್ಯ ಅವರು ಹೊಸ ಬಜೆಟ್ ಬೇಡ ಎನ್ನುತ್ತಾರೆ. ಕಾಂಗ್ರೆಸ್ನಲ್ಲಿ ಪರಮೇಶ್ವರ್ ಮತ್ತಿತರರು ಬಜೆಟ್ ಮಂಡನೆಯಾಗಲಿ ಎನ್ನುತ್ತಾರೆ. ಈ ಗೊಂದಲದ ಸಂದರ್ಭದಲ್ಲಿ ಮುಂದಿನ ಬೆಳವಣಿಗೆ ಬಗ್ಗೆ ರಾಜ್ಯದ ಜನ ಕಾತುರತೆಯಿಂದ ಕಾಯುತ್ತಿದ್ದಾರೆ. ರೈತರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಅವರು ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿ ಸಾಲ ಮನ್ನಾದ ಶೇ.50ರಷ್ಟು ಹಣ ಭರಿಸುವಂತೆ ಬೇಡಿಕೆ ಮುಂದಿಟ್ಟಿರುವುದು ಸರಿಯಲ್ಲ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಸರ್ಕಾರಗಳು ಕೇಂದ್ರದಿಂದ ಯಾವುದೇ ಅನುದಾನ ಪಡೆಯದೆ ಸಾಲ ಮನ್ನಾ ಮಾಡಿವೆ. ಕುಮಾರಸ್ವಾಮಿ ಅವರು ತಮ್ಮ ಆರ್ಥಿಕ ಇತಿಮಿತಿಯಲ್ಲಿ ರೈತರ ಸಾಲ ಮನ್ನಾ ಮಾಡದೆ ಕೇಂದ್ರದ ಮೇಲೆ ಜವಾಬ್ದಾರಿ ವಹಿಸುತ್ತಿರುವುದು ಖಂಡನೀಯ ಎಂದರು.
ರೈತ ಮುಖಂಡರ ಸಭೆ ನಡೆಸಿದಾಗ 15 ದಿನಗಳಲ್ಲಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ, ಒಂದು ತಿಂಗಳಾದರೂ ಈವರೆಗೂ ಸಾಧ್ಯವಾಗಿಲ್ಲ. ಮುಂದಿನ ಬಜೆಟ್ ಮಂಡನೆಯಾಗುವವರೆಗೂ ನಾವು ನಿರೀಕ್ಷೆ ಮಾಡುತ್ತೇವೆ. ಬಜೆಟ್ನಲ್ಲಿ ಸಾಲ ಮನ್ನಾ ಆಗಲೇಬೇಕು. ಇಲ್ಲವಾದರೆ ಹೋರಾಟ ಮಾಡುತ್ತೇವೆ. ಕುಮಾರಸ್ವಾಮಿ ಅವರು ಬಜೆಟ್ ಮಂಡಿಸುವ ಮುನ್ನ ಜೆಡಿಎಸ್ ಮತ್ತು ಕಾಂಗ್ರೆಸ್ನ ಪ್ರಣಾಳಿಕೆಯನ್ನು ಒಮ್ಮೆ ಓದಿಕೊಳ್ಳಲಿ ಎಂದು ಸಲಹೆ ನೀಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೇಸು ದಾಖಲಿಸಲು ಮೈಸೂರಿನ ನ್ಯಾಯಾಲಯ ಆದೇಶ ನೀಡಿರುವ ಬಗ್ಗೆ ಆದೇಶ ಪರಿಶೀಲಿಸಿದ ನಂತರ ಪ್ರತಿಕ್ರಿಯಿಸುವುದಾಗಿ ಹೇಳಿದರು.
ಗೌರಿಲಂಕೇಶ್ ಹತ್ಯೆ ಪ್ರಕರಣದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲು ಯಡಿಯೂರಪ್ಪ ನಿರಾಕರಿಸಿದರು. ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿದ್ದ ಬಿ.ಜೆ.ಪುಟ್ಟಸ್ವಾಮಿ ಅವರ ರಾಜೀನಾಮೆ ಪತ್ರದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
Farmers’ debt waiver,Budget,BJP B S Yeddyurappa