ರಾಜ್ಯದಲ್ಲಿ ಮಳೆ ಹಾಗೂ ಕೋವಿಡ್ ಅನಾಹುತದಿಂದ ಜನರು ಕಂಗಾಲಾಗಿದ್ದರೆ, ಮುಖ್ಯಮಂತ್ರಿ ಬದಲಾವಣೆ ಗೊಂದಲದಲ್ಲಿ ಸರ್ಕಾರ ನಿರತವಾಗಿದೆ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಜು.23- ರಾಜ್ಯದಲ್ಲಿ ಮಳೆ ಹಾಗೂ ಕೋವಿಡ್ ಅನಾಹುತದಿಂದ ಜನರು ಕಂಗಾಲಾಗಿದ್ದರೆ, ಮುಖ್ಯಮಂತ್ರಿ ಬದಲಾವಣೆ ಮತ್ತು ಮುಖ್ಯಮಂತ್ರಿ ಮುಂದುವರಿಕೆಯ ಗೊಂದಲದಲ್ಲಿ ಸರ್ಕಾರ ನಿರತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿ ಇಂತಹ ಕೆಟ್ಟ ಸರ್ಕಾರ ಬಂದಿಲ್ಲ. ರಾಜ್ಯವನ್ನು ಹತ್ತು ವರ್ಷಗಳ ಹಿಂದಕ್ಕೆ ಕೊಂಡೊಯ್ದಿದ್ದಾರೆ. ಯೋಜನೆ ಹೆಸರಿನಲ್ಲಿ ಹಣ ಲೂಟಿ ಮಾಡಲು ಸ್ವೇಚ್ಛಾಚಾರದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದರು.

ಮಳೆ ಹಾಗೂ ಕೋವಿಡ್‍ನಂತಹ ಗಂಭೀರ ಸಮಸ್ಯೆ ಸಂದರ್ಭದಲ್ಲಿ ಇಂತಹ ರಾಜಕೀಯ ಸನ್ನಿವೇಶ ನಿರ್ಮಾಣವಾಗಿರುವುದು ನಾಡಿನ ಜನರ ದೌರ್ಭಾಗ್ಯ ಎಂದರು.

ರಾಜ್ಯದಲ್ಲಿ ಅತಿವೃಷ್ಟಿ, ಪ್ರವಾಹದಂತಹ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಕಳೆದ 2019-20ರಲ್ಲೂ ಮಳೆ ಅನಾಹುತ ಸಂಭವಿಸಿತ್ತು. ಆಡಳಿತ ಪಕ್ಷ ಜನರ ಸಮಸ್ಯೆಗಿಂತ ನಾಯಕತ್ವ ಬದಲಾವಣೆಗೆ ಆದ್ಯತೆ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರದ ಆಡಳಿತ ಯಾವ ರೀತಿ ನಡೆದಿದೆ, ತೆರಿಗೆ ಹಣ ಸದ್ಬಳಕೆಯಾಗಿದೆಯೇ ಅಥವಾ ಲೂಟಿಯಾಗಿದೆಯೇ ಎಂಬುದನ್ನು ಜನರ ಮುಂದೆ ತೆಗೆದುಕೊಂಡು ಹೋಗುವ ಕಾಲ ದೂರವಿಲ್ಲ. ಕೋವಿಡ್ ಸೇರಿದಂತೆ ಹಲವು ರೀತಿಯ ಅನಾಹುತಗಳು ರಾಜ್ಯದ ಜನರನ್ನು ಕಾಡಿದರೂ ಸರ್ಕಾರ ಸೂಕ್ತ ರೀತಿಯಲ್ಲಿ ನೆರವಿಗೆ ಬಂದಿಲ್ಲ ಎಂದು ಅವರು ಟೀಕಿಸಿದರು.

ಮಠಾಧೀಶರು ದೊಡ್ಡ ಪ್ರಮಾಣದಲ್ಲಿ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಂದೇಶ ರವಾನೆ ಮಾಡಿದ್ದಾರೆ. ಅದರ ಬಗ್ಗೆ ತಾವು ಲಘುವಾಗಿ ಮಾತನಾಡುವುದಿಲ್ಲ. ಸರಿ-ತಪ್ಪು ನಿರ್ಧರಿಸುವುದನ್ನು ನಾಡಿನ ಜನತೆಯ ವಿವೇಚನೆಗೆ ಬಿಡುವುದಾಗಿ ಅವರು ತಿಳಿಸಿದರು.

ಪಾದಯಾತ್ರೆ: ಮೇಕೆದಾಟು ಯೋಜನೆ, ಮಹದಾಯಿ ಹಾಗೂ ಕೃಷ್ಣಾ ಮೇಲ್ದಂಡೆ ಮೂರನೆ ಹಂತದ ಯೋಜನೆ ಸ್ಥಗಿತಗೊಂಡಿರುವ ಬಗ್ಗೆ ಪಾದಯಾತ್ರೆ ನಡೆಸಿ ಕೇಂದ್ರ ಸರ್ಕಾರದ ಕಣ್ಣು ತೆರೆಸಲಾಗುವುದು ಎಂದರು.

ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಸಿಡಿದೇಳಬೇಕಾಗುತ್ತದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಪಾದಯಾತ್ರೆ ನಡೆಸಿ ಅನ್ಯಾಯಗಳ ಬಗ್ಗೆ ಕಣ್ಣು ತೆರೆಸುವ ಪ್ರಯತ್ನ ಮಾಡಲಾಗುವುದು. ಮೇಕೆದಾಟು, ಮಹದಾಯಿ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆ ಹಂತದ ಕಾಮಗಾರಿ ಸ್ಥಗಿತವಾಗಿರುವ ವಿಚಾರದಲ್ಲಿ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಲಾಗುವುದು.

ಆನಂತರ ಮುಖ್ಯಮಂತ್ರಿಗೂ ಮನವಿ ಸಲ್ಲಿಸಲಾಗುವುದು. ಒಂದು ತಿಂಗಳ ಕಾಲಾವಕಾಶ ನೀಡಿ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ತೀರ್ಮಾನ ಕೈಗೊಳ್ಳದಿದ್ದರೆ ಪಾದಯಾತ್ರೆ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಹೇಳಿದರು.

ಮಹದಾಯಿ, ಮೇಕೆದಾಟು ಮತ್ತು ಕೃಷ್ಣಾ ಮೇಲ್ದಂಡೆ ವಿಚಾರದಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆಯನ್ನೇ ಹೊರಡಿಸಿಲ್ಲ. ಈ ವಿಚಾರದಲ್ಲಿ ರಾಜ್ಯಕ್ಕಾಗಿರುವ ಅನ್ಯಾಯಗಳ ಅಂಕಿ-ಅಂಶಗಳನ್ನೊಳಗೊಂಡ ಮನವಿ ಪತ್ರಗಳನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುವುದು ಎಂದರು.

ಜಿಲ್ಲಾವಾರು ಸಭೆ ನಡೆಸುತ್ತಿದ್ದು, ಈಗಾಗಲೇ 26 ಜಿಲ್ಲೆಗಳ ಜೆಡಿಎಸ್ ಪಕ್ಷದ ಸಭೆ ಮಾಡಿದ್ದೇವೆ. ಪಕ್ಷ ಸಂಘಟನೆಗೆ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಉತ್ಸಾಹ ತೋರುತ್ತಿರುವುದು ಕಂಡುಬಂದಿದೆ. ಆಷಾಢದ ನಂತರ ಎರಡನೆ ಹಂತದ ಕಾರ್ಯಕ್ರಮವನ್ನು ಪ್ರಾರಂಭ ಮಾಡುತ್ತೇವೆ. ಕೋವಿಡ್‍ನಿಂದಾಗಿ ಪಕ್ಷ ಸಂಘಟನೆಗೆ ಹಿನ್ನಡೆಯಾಗಿತ್ತು. ಇಂದು ಬಿಬಿಎಂಪಿ ಚುನಾವಣೆ ಸಿದ್ಧತೆ, ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರಗಳ ಪ್ರಮುಖರ ಸಭೆ ನಡೆಸಲಾಯಿತು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ