ಬೆಂಗಳೂರು, ಜು.20-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲು ಮುಂದಾಗಿರುವ ಕೇಂದ್ರ ಬಿಜೆಪಿ ವರಿಷ್ಠರ ಲೆಕ್ಕಾಚಾರ ತಿರುಗುಬಾಣವಾಗುವ ಲಕ್ಷಣಗಳು ಗೋಚರಿಸಿವೆ.
ಅಂದುಕೊಂಡಿದ್ದೇ ಒಂದು. ಆಗುತ್ತಿರುವುದೇ ಮತ್ತೊಂದು ಎಂಬಂತೆ ಯಡಿಯೂರಪ್ಪ ಅವರನ್ನು ನಾಯಕತ್ವದಿಂದ ಪದಚ್ಯುತಿಗೊಳಿಸದಂತೆ ಪಕ್ಷಾತೀತವಾಗಿ ಲಿಂಗಾಯಿತ ಸಮುದಾಯ ಅವರ ಬೆನ್ನಿಗೆ ನಿಂತಿರುವುದು ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಈವರೆಗೂ ಯಡಿಯೂರಪ್ಪ ನಾಯಕತ್ವಕ್ಕೆ ಎಂದೂ ಬೆಂಬಲ ಕೊಡದ ಅಖಿಲಭಾರತ ವೀರಶೈವ ಮಹಾಸಭಾ, ಅದರ ಅಧ್ಯಕ್ಷ ಹಾಗೂ ಕಾಂಗ್ರೆಸ್ನ ಹಿರಿಯ ಮುಖಂಡ ಶ್ಯಾಮನೂರು ಶಿವಶಂಕರಪ್ಪ, ಪ್ರಭಾವಿ ಮುಖಂಡ ಎಂ.ಬಿ.ಪಾಟೀಲ್ ಸೇರಿದಂತೆ ಅನೇಕರು ಬಹಿರಂಗವಾಗಿಯೇ ಬಿಎಸ್ವೈ ನಾಯಕತ್ವಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.
ಇದರ ಜತೆಗೆ ನಾಡಿನ ಪ್ರಭಾವಿ ಮಠಗಳು, ಧಾರ್ಮಿಕ ಮುಖಂಡರು, ಮಠಾಧೀಶರು ಸೇರಿದಂತೆ ಅನೇಕರು ಪಕ್ಷಾತೀತವಾಗಿ ಮುಖ್ಯಮಂತ್ರಿ ಬೆಂಬಲಕ್ಕೆ ಬಹಿರಂಗವಾಗಿಯೇ ಅಖಾಡಕ್ಕಿಳಿದಿರುವುದು ವರಿಷ್ಠರ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡಿದೆ.
ನವದೆಹಲಿಯಲ್ಲಿ ಭೇಟಿಯಾದ ವೇಳೆ ಯಡಿಯೂರಪ್ಪ ಅವರು ಗೌರವಯುತವಾಗಿ ಅಧಿಕಾರದಿಂದ ನಿರ್ಗಮಿಸಬಹುದೆಂಬ ಲೆಕ್ಕಾಚಾರ ಕೇಂದ್ರ ನಾಯಕರದ್ದಾಗಿತ್ತು. ಬಿಎಸ್ವೈ ಸುಲಭವಾಗಿ ಅಧಿಕಾರಿದಂದ ಕೆಳಗಿಳಿಯಲಿದ್ದಾರೆ. ಯಾವುದೇ ಅಡೆ-ತಡೆ ಇಲ್ಲದೆ ಪರ್ಯಾಯ ನಾಯಕತ್ವ ನರವೇರಲಿದೆ ಎಂಬ ಮುಂದಾಲೋಚನೆಯಲ್ಲಿ ದೆಹಲಿ ನಾಯಕರಿದ್ದರು.
ಆದರೆ, ಕಳೆದ ಮೂರು ದಿನಗಳಿಂದ ಯಡಿಯೂರಪ್ಪನವರಿಗೆ ಕಾಂಗ್ರೆಸ್ನ ನಾಯಕರೇ ಬೆಂಬಲ ಸೂಚಿಸುತ್ತಿರುವುದು, ಮಠಾಧೀಶರು ಕೂಡ ನಾಯಕತ್ವವನ್ನು ಬದಲಾಯಿಸದಂತೆ ವರಿಷ್ಠರಿಗೆ ಒತ್ತಡ ಹಾಕುತ್ತಿರುವುದು ಬಿಎಸ್ವೈ ಬಗ್ಗೆ ಸಹಾನುಭೂತಿ ಹೆಚ್ಚಾಗುವಂತೆ ಮಾಡಿದೆ.
ರಾಜ್ಯದ ಪ್ರಭಾವಿ ಲಿಂಗಾಯಿತ ಸಮುದಾಯದ ನಾಯಕನಾಗಿರುವ ಯಡಿಯೂರಪ್ಪನವರನ್ನು ಏಕಾಏಕಿ ಅಧಿಕಾರದಿಂದ ಪದಚ್ಯುತಿಗೊಳಿಸಿದರೆ ಸಮುದಾಯದ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಇದು 2023ರ ವಿಧಾನಸಭೆ ಹಾಗೂ 2024ರ ಲೋಕಸಭೆ ಚುನಾವಣೆಗೆ ಮುಳುವಾಗಬಹುದು ಎಂಬ ಆತಂಕ ವರಿಷ್ಠರಿಗೆ ಎದುರಾಗಿದೆ.
ಯಡಿಯೂರಪ್ಪನವರನ್ನು ಬಲವಂತವಾಗಿ ಇಲ್ಲವೇ ಒತ್ತಾಯದಿಂದ ಇಳಿಸುವಂತಹ ದುಸ್ಸಾಹಸಕ್ಕೆ ಕೈ ಹಾಕಬೇಡಿ. ಅವರ ಶಕ್ತಿ, ಸಾಮಥ್ರ್ಯ ಏನೆಂಬುದು ನನಗೆ ತಿಳಿದಿದೆ. ಗೌರವಯುತವಾಗಿ ನಡೆಸಿಕೊಂಡೇ ಅಧಿಕಾರದಿಂದ ಕೆಳಗಿಳಿಸುವಂತೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಸೂಚನೆ ನೀಡಿದ್ದರು ಎಂದು ತಿಳಿದು ಬಂದಿದೆ.
ಕರ್ನಾಟಕದಲ್ಲಿಯಡಿಯೂರಪ್ಪ ಒಬ್ಬ ಜನನಾಯಕ. ವೈಯಕ್ತಿಕವಾಗಿ ಏನೇ ಆರೋಪ-ಪ್ರತ್ಯಾರೋಪಗಳಿದ್ದರೂ ಬಿಜೆಪಿಯನ್ನು ಅಧಿಕಾರಕ್ಕೆ ತರಬಲ್ಲ, ಇಲ್ಲವೇ ಸೋಲಿಸಬಲ್ಲ ಶಕ್ತಿ ಇರುವ ಏಕೈಕ ನಾಯಕ. ಇತಿಹಾಸದಿಂದ ನಾವು ಪಾಠ ಕಲಿಯದಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಒಂದು ಸಮುದಾಯ ಯಾವ ರೀತಿ ಶಾಶ್ವತವಾಗಿ ದೂರವಾಗಿದೆಯೋ ಅದೇ ರೀತಿ ನಮ್ಮನ್ನು ಬಿಟ್ಟು ಹೋಗಲಿದೆ ಎಂಬ ಎಚ್ಚರಿಕೆಯನ್ನು ಸಹ ಮೋದಿ ನೀಡಿದ್ದರು.
ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕಾದರೆ ಅದರ ಸಂಪೂರ್ಣ ಜವಾಬ್ದಾರಿಯನ್ನು ನಡ್ಡಾ ಅವರೇ ಹೊತ್ತಿಕೊಳ್ಳಬೇಕು. ಒಂದು ವೇಳೆ ಅವಮಾನಕಾರಿಯಾಗಿ ಇಳಿಸಿದರೆ 2013ರ ಚುನಾವಣಾ ಫಲಿತಾಂಶ ನಮ್ಮ ಕಣ್ಣಮುಂದೆ ಇದೆ. ಹೀಗಾಗಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಸೂಚನೆ ಕೊಟ್ಟಿದ್ದರು.
ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರನ್ನು ಅವಮಾನಕರ ರೀತಿಯಲ್ಲಿ ಅಧಿಕಾರದಿಂದ ಕೆಳಗಿಳಿಸಿದ್ದಕ್ಕೆ ಈಗಲೂ ಕೂಡ ವೀರಶೈವ ಲಿಂಗಾಯಿತ ಸಮುದಾಯ ಆ ಪಕ್ಷದಿಂದ ದೂರ ಸರಿದಿದೆ. ನಮಗೆ ಇದು ಎಚ್ಚರಿಕೆಯ ಗಂಟೆಯಾಗಬೇಕು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ನಾಯಕತ್ವ ಕುರಿತಂತೆ ನಡ್ಡಾ ಅವರೇ ಮಧ್ಯ ಪ್ರವೇಶಿಸಬೇಕು. ಪಕ್ಷದ ಯಾರೊಬ್ಬರೂ ಕೂಡ ಇದರಲ್ಲಿ ತಲೆ ಹಾಕದಂತೆ ಮೋದಿ ಅವರೇ ತಾಕೀತು ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.
ಈಗ ಯಡಿಯೂರಪ್ಪನವರ ಬೆನ್ನಿಗೆ ಅದೇ ಸಮುದಾಯ ನಿಂತಿರುವುದು ಬಿಜೆಪಿಯ ವರಿಷ್ಠರ ಲೆಕ್ಕಾಚಾರವನ್ನು ಬುಡಬೇಲು ಮಾಡಿದ್ದು, ಕೈ -ಕೈ ಹಿಸುಕಿಕೊಳ್ಳುವಂತೆ ಮಾಡಿದೆ.
ನಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ಏನೋ ಮಾಡಲು ಹೋಗಿ ವರಿಷ್ಠರಿಗೆ ಯಡಿಯೂರಪ್ಪ ನಾಯಕತ್ವವೇ ಕಗ್ಗಂಟಾಗಿ ಪರಿಣಮಿಸಿದೆ.