ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ವಿರೋಧಿಸಿದರೆ ಸರ್ಕಾರವನ್ನೇ ಉರುಳಿಸಬಲ್ಲೆ ಎಂದ ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರವಾಗಲೀ ಅಥವಾ ಉತ್ತರಪ್ರದೇಶ ಸರ್ಕಾರವಾಗಲಿ ವಿರೋಧಿಸಿದರೆ ಸರ್ಕಾರವನ್ನೇ ಉರುಳಿಸುವುದಾಗಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸಭೆಯೊಂದರಲ್ಲಿ ಮಾತನಾಡಿದ ಸ್ವಾಮಿ, ರಾಮಮಂದಿರ ಸಂಬಂಧ ವಿಚಾರಣೆಯನ್ನು ನ್ಯಾಯಾಲಯ ಜನವರಿಗೆ ಕಾಯ್ದಿರಿಸಿದ್ದರೆ ನಾವಿದನ್ನು ಎರಡು ವಾರಗಳಲ್ಲಿ ಗೆಲ್ಲಲಿದ್ದೇವೆ.ಏಕೆಂದರೆ ನಮ್ಮ ಎರಡು ವಿರೋಧಿ ಪಕ್ಷಗಳೆಂದರೆ ಅದು ಉತ್ತರ ಪ್ರದೇಶ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳಾಗಿವೆ, ಅವುಗಳಿಗೆ ನನ್ನನ್ನು ವಿರೋಧಿಸುವ ಧೈರ್ಯವಿದೆಯೆ? ಒಂದು ವೇಳೆ ಅವು ಹಾಗೆ ಮಾಡಿದ್ದಾದರೆ ನಾನು ಸರ್ಕಾರವನ್ನೇ ಉರುಳಿಸುತ್ತೇನೆ. ಆದರೆ ಅವರು ಹಾಗೆ ಮಾಡಲಾರರು ಎನ್ನುವುದು ನನಗೆ ತಿಳಿದಿದೆ ಎಂದಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ಮುಸ್ಲಿಮರಿಗೆ ಯಾವುದೇ ಆಕ್ಷೇಪಗಳಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಅವರು ಯಾವುದೇ ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎನ್ನುವುದು ನನಗೆ ತಿಳಿದಿದೆ. ನಾನು ವೈಯಕ್ತಿಕವಾಗಿ ಮುಸ್ಲಿಮರನ್ನು ಭೇಟಿಯಾಗಿದ್ದು ಅವರು ಈ ಮಾತುಗಳನ್ನು ಹೇಳಿದ್ದಾರೆ ಎಂದರು.

ಮೊಘಲ್ ದೊರೆ ಬಾಬರ್ ವಶಪಡಿಸಿಕೊಂಡ ಭೂಮಿ ನಮ್ಮದು ಎಂದು ಸುನ್ನಿ ವಕ್ಫ್ ಮಂಡಳಿಯು ನ್ಯಾಯಾಲಯದಲ್ಲಿ ವಾದ ಹೂಡಿದೆ. ಆದರೆ ಅವರೆಲ್ಲಿಯೂ ನಾವು ಮತ್ತೆ ಆ ಸ್ಥಳದಲ್ಲಿ ಬಾಬರಿ ಮಸೀದಿ ನಿರ್ಮಾಣ ಮಾಡುವುದಾಗಿ ಹೇಳಿಲ್ಲ. ಇನ್ನು ರಾಮಜನ್ಮಭೂಮಿ ವ್ಯಾಸ್ ಹಾಗೂ ನಿರ್ಮೋಹಿ ಅಖಾಡಗಳು ಸಹ ಎರಡು ಟ್ರಸ್ಟಿಗಳಾಗಿದ್ದು ಅವರಿಗೆ ಎರಡು ಪ್ರತ್ಯೇಕ ಮಂದಿರಗಳು ಬೇಕು ಎಂದು ಹೇಳಿದೆ.

ಇದರಂತೆಯೇ ರಾಮಜನ್ಮಭೂಮಿಯ ಎರಡುಭಾಗ ಹಿಂದೂಗಳಿಗೆ, ಒಂದು ಭಾಗ ಮುಸ್ಲಿಮರಿಗೆ ಸೇರತಕ್ಕದ್ದೆಂದು ಅಲಹಬಾದ್ ಹೈಕೋರ್ಟ್ ಹೇಳಿದೆ.ಇದನ್ನು ಸುನ್ನಿ ವಕ್ಫ್ ಮಂಡಳಿಯು ಪ್ರಶ್ನಿಸಿದೆ, ಏಕೆಂದರೆ ಭೂಮಿಯನ್ನು ಮುಸ್ಲಿಮರಿಗೆ ನೀಡಲಾಗಿದೆ ಹೊರತು ಸುನ್ನಿ ವಕ್ಫ್ ಮಂಡಳಿಗಲ್ಲ. ಸಂವಿಧಾನದ ಪ್ರಕಾರ ನನಗೆ ಪ್ರಾರ್ಥನೆ ಸಲ್ಲಿಸುವ ಹಕ್ಕು ಇದೆ.ನ್ಯಾಯಾಲಯ ನನ್ನ ಮನವಿ ಕೇಳಲು ಸಮ್ಮತಿಸಿದೆ.ಇಲ್ಲಿ ಶ್ರೀರಾಮನ ಜನನವಾಗಿತ್ತು ಎನ್ನುವುದು ನನ್ನ ನಂಬಿಕೆಯಾಗಿದ್ದು ನಾನಿಲ್ಲಿ ದೊಡ್ಡ ರಾಮಮಂದಿರವನ್ನು ಬಯಸುತ್ತೇನೆ.ಆದರೆ ಮುಸ್ಲಿಮರು ತಮ್ಮ ಜಾಗವನ್ನು(ಆಸ್ತಿಯನ್ನು) ಕೇಳುತ್ತಿದ್ದಾರೆ. ಇದು ಮೂಲಭೂತ ಹಕ್ಕಲ್ಲ. ಹೀಗಾಗಿ ಅವರ ಸಾಮಾನ್ಯ ಆಸ್ತಿ ಹಕ್ಕಿಗಿಂತ ನನ್ನ ಮೂಲಭೂತ ಹಕ್ಕಿಗೆ ಹೆಚ್ಚು ಪ್ರಧಾನ್ಯ ನೀಡಬೇಕೆಂದು ನಾನು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದೇನೆ ಎಂದು ಸುಬ್ರಹಮಣ್ಯನ್ ಸ್ವಾಮಿ ಹೇಳಿದ್ದಾರೆ.

ಇದೇವೇಳೆ ರಾಮಜನ್ಮಭೂಮಿಯ ವಿವಾದಿತ ಸ್ಥಳದಲ್ಲಿ ಪ್ರಾಚೀನ ಕಾಲದಲ್ಲಿ ರಾಮನ ದೇವಾಲಯವಿತ್ತು ಎಂದು ಭಾರತದ ಪುರಾತತ್ವ ಇಲಾಖೆ ಹೇಳಿರುವುದಾಗಿ ಸ್ವಾಮಿ ವಾದಿಸಿದ್ದಾರೆ.

Ayodhya,Ram Mandir,BJP,Subrahmanyan swamy

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ