ಹೊಸದಿಲ್ಲಿ: ಕೊರೋನಾ ಮೂರನೇ ಅಲೆಯು ಸನಿಹದಲ್ಲಿದ್ದು ಪ್ರವಾಸೋದ್ಯಮ, ತೀರ್ಥಯಾತ್ರೆ, ಇತರ ಧಾರ್ಮಿಕ ಉತ್ಸವಗಳಲ್ಲಿ ಜನರು ಸೇರದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ ಎಂದು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಹೇಳಿದೆ.
ಜಾಗತಿಕ ಸಾಕ್ಷ್ಯಾಧಾರಗಳು ಮತ್ತು ಎಲ್ಲ ಸೋಂಕಿನ ಇತಿಹಾಸವನ್ನು ಅವಲೋಕಿಸಿದರೆ 3ನೇ ಅಲೆ ನಿಶ್ಚಿತ ಎಂದು ಹೇಳಿರುವ ಐಎಂಎ, ಭಾರತದ ನಾನಾ ಭಾಗಗಳಲ್ಲಿ ಸಾರ್ವಜನಿಕರ ಸೇರುವಿಕೆ ಮತ್ತು ಅಕಾರಿಗಳ ಕ್ರಮ ಕೈಗೊಳ್ಳದಿರುವ ಕುರಿತು ಖೇದ ವ್ಯಕ್ತಪಡಿಸಿದೆ.
ದೇಶಾದ್ಯಂತ ಹೆಚ್ಚಿನ ರಾಜ್ಯಗಳಲ್ಲಿ ಜುಲೈ ಮೊದಲ ವಾರದ ಬಳಿಕ ಕೊರೋನಾ ನಿರ್ಬಂಧಗಳನ್ನು ಸಡಿಲಿಸುತ್ತಿದ್ದಂತೆ ಪ್ರವಾಸಿ ತಾಣಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರುತ್ತಿರುವುದಕ್ಕೆ ಈ ಎಚ್ಚರಿಕೆ ನೀಡಿದೆ.
2ನೇ ಅಲೆಯಿಂದ ಹೊರಬರಲು ಆಧುನಿಕ ವೈದ್ಯಕೀಯ ಕ್ರಮಗಳು ಮತ್ತು ರಾಜಕೀಯ ನಾಯಕತ್ವದ ನಿರ್ಧಾರಗಳು ಕಾರಣವಾದವು. ಈಗ ಬಹುತೇಕ ರಾಜ್ಯಗಳಲ್ಲಿ ಜನಸಂದಣಿಗೆ ಅವಕಾಶ ನೀಡುತ್ತಿರುವುದು ಆತಂಕಕಾರಿ ವಿಷಯ ಎಂದು ಐಎಂಎ ಕಳವಳ ವ್ಯಕ್ತಪಡಿಸಿದೆ.
ಕೊರೋನಾ 3 ಅಲೆಯು ಪ್ರಸ್ತುತ ಕೈಗೊಂಡಿರುವ ಕೊರೋನಾ ಸಂಭಂದ ನಿರ್ಬಂಧಗಳ ಸಡಲಿಕೆಯಿಂದ ಉಂಟಾಗುವ ಸಣ್ಣ ಆರ್ಥಿಕ ಚೇತರಿಕೆಯ ಲಾಭಗಳನ್ನು ನಾಶಪಡಿಸುತ್ತದೆ. ಆಸ್ಪತ್ರೆಯಲ್ಲಿ ಭಾರೀ ಸಂಖ್ಯೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಬೇಕಾಗಿ ಬಂದಾಗ ಉಂಟಾಗುವ ಪರಿಣಾಮಗಳನ್ನು ಎದುರಿಸುವುದಕ್ಕಿಂತ ಈಗ ನಡೆಯುತ್ತಿರುವ ಜನಸಂದಣಿ ತಪ್ಪಿಸುವ ಮೂಲಕ ಸೋಂಕು ವಿರುದ್ಧದ ಹೋರಾಟದಲ್ಲಿ ಸದೃಢ ಹೆಜ್ಜೆಗಳನ್ನು ಇಡಬಹುದು ಎಂದು ತಿಳಿಸಿದೆ.
ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 40 ಸಾವಿರಕ್ಕಿಂತ ಕಡಿಮೆಯಾಗುತ್ತಿದೆ ಮತ್ತು ಒಟ್ಟಾರೆ ಸೋಂಕಿನ ಪ್ರಮಾಣ ಶೇ.5 ಕಡಿಮೆಯಾಗಿದ್ದರೂ ತಜ್ಞರು ಆರ್-ಸಂಖ್ಯೆ (ಒಬ್ಬ ಸೋಂಕಿತನು ಎಷ್ಟು ಜನರಿಗೆ ಹರಡುತ್ತಾನೆ ಎಂಬುದು. ಸದ್ಯಕ್ಕೆ ಒಬ್ಬನು ಸುಮಾರು 80 ಮಂದಿಗೆ ಸೋಂಕು ಹರಡುತ್ತಾನೆಂದು ಅಂದಾಜಿಸಲಾಗಿದೆ) ಕುರಿತು ಕಳವಳವ್ಯಕ್ತಪಡಿದ್ದಾರೆ.
ಕನಿಷ್ಠ 3 ತಿಂಗಳು ಕಾಯಿರಿ
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಂತೆ ಈ ನಿರ್ಣಾಯಕ ಹಂತದಲ್ಲಿ ಇನ್ನು ಕನಿಷ್ಠ 3 ತಿಂಗಳು ಕೊರೋನಾ ನಿರ್ಬಂಧ ಉಲ್ಲಂಘನೆಯನ್ನು ತಡೆಯಬೇಕು ಮತ್ತು ಜನಸಂದಣಿಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು ಎಂದು ಐಎಂಎ ಅಧ್ಯಕ್ಷ ಡಾ. ಜಾನ್ರೋಸ್ ಆಸ್ಟಿನ್ ಜಯಲಾಲ್ ಅವರು ವಿಡಿಯೋ ಸಂದೇಶ ನೀಡಿದ್ದಾರೆ.
ಪ್ರವಾಸಿತಾಣಗಳಿಗೆ ಭಾರೀ ಸಂಖ್ಯೆಯಲ್ಲಿ ಅವಕಾಶ, ಪ್ರವಾಸಕ್ಕೆ ಆಹ್ವಾನ ನೀಡುವ ಕೊಡುಗೆಗಳು, ತೀರ್ಥಯಾತ್ರೆ, ಧಾರ್ಮಿಕ ಉತ್ಸವಗಳು ಜನತೆಗೆ ನೀಡಬೇಕಿರುವುದೇನೋ ನಿಜ; ಅದಕ್ಕಾಗಿ ಅವಸರ ಮಾಡದೇ ಇನ್ನೂ ಕೆಲವು ತಿಂಗಳು ಕಾಯಬಹುದು. ಈ ಕ್ರಮಗಳಿಗೆ ಅವಕಾಶ ನೀಡುವುದು ಮತ್ತು ಲಸಿಕೆ ಪಡೆಯದ ಜನರು ಸಾರ್ವಜನಿಕ ಸಮಾರಂಭಗಳಲ್ಲಿ ಮುಕ್ತವಾಗಿ ಭಾಗವಹಿಸುವುದು 3ನೇ ಅಲೆಯ ಸಂಭಾವ್ಯ ಭಾರೀ ವೇಗ ಮತ್ತು ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ನಿರ್ಬಂಧಗಳನ್ನು ಪಾಲಿಸಿ ಲಸಿಕೆಯನ್ನೂ ಪಡೆಯಿರಿ
ಎಲ್ಲರೂ ಕೊರೋನಾ ನಿರ್ಬಂಧಗಳನ್ನು ಪಾಲಿಸುವ ಮೂಲಕ ಹಾಗೂ ಲಸಿಕೆ ಪಡೆಯುವುದರಿಂದ ಮೂರನೇ ಅಲೆಯ ಪ್ರಭಾವವನ್ನು ತಗ್ಗಿಸಬಹುದು. ಇದು ಕಳೆದ ಒಂದೂವರೆ ವರ್ಷದಿಂದ ನಮಗೆ ದೊರೆತ ಅನುಭವ ಎಂಬುದನ್ನು ಯಾರೂ ಮರೆಯಬಾರದು ಎಂದು ಐಎಂಎ ತಿಳಿಸಿದೆ.