ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಪರಿಗಣಿಸಲು ಕೇಂದ್ರ ಸರ್ಕಾರ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಯ 21,473 ಕೋಟಿ ರೂ.ಗಳ ಪರಿಷ್ಕತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಿರುವ ಸಂಪುಟ ಸಭೆಯು, ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲೂ ನಿರ್ಧರಿಸಿದೆ.
ಅಷ್ಟೇ ಅಲ್ಲದೆ, ಕನಿಷ್ಠ ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ, ಜೋಳ, ತೊಗರಿಬೇಳೆ, ಉದ್ದು, ಹೆಸರುಕಾಳು ಸೇರಿದಂತೆ ಆಹಾರ ಧಾನ್ಯಗಳ ಖರೀದಿಸಲು ತೀರ್ಮಾನಿಸಲಾಗಿದೆ. ಜೊತೆಗೆ ಖರೀದಿ ಪ್ರಮಾಣ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲೂ ಸಂಪುಟ ಉಪ ಸಮಿತಿ ನೀಡಿರುವ ವರದಿಗೆ ಸಮ್ಮತಿ ಸೂಚಿಸಿದೆ.
ಅಂತೆಯೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಕುರಿತಂತೆ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ನೇತೃತ್ವದ ತಜ್ಞರ ಸಮಿತಿ ನೀಡಿರುವ ವರದಿಗೂ ಅಸ್ತು ಎಂದಿದೆ.
ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡಿದ ಠೇವಣಿದಾರರ ಹಿತ ಕಾಯುವ ಸಂಬಂಧ ಚರ್ಚಿಸಿದ್ದು, ತಿದ್ದುಪಡಿ ವಿಧೇಯಕವೊಂದಕ್ಕೆ ಸಂಪುಟ ಅಸ್ತು ಎಂದಿದೆಯಲ್ಲದೆ, ಇದೇ ಅವೇಶನದ ಮುಂದೆ ಬರುವ ಸಾಧ್ಯತೆಗಳಿವೆ. ಇನ್ನು ಗಣಿಗಾರಿಕೆ, ಅದಿರು ಸಾಗಣೆಗೆ ಅರ್ಜಿ ಸಲ್ಲಿಸಿದ 24 ಗಂಟೆಯೊಳಗೆ ಅನುಮತಿ ನೀಡಬೇಕೆಂಬ ವಿವಾದಿತ ಪ್ರಸ್ತಾಪಕ್ಕೆ ನಕಾರ ವ್ಯಕ್ತಪಡಿಸಿದೆ. 3 ಖಾಸಗಿ ವಿವಿಗಳ ಸ್ಥಾಪನೆಗೆ ಬಂದಿರುವ ಪ್ರಸ್ತಾವನೆಯನ್ನು ಯುಜಿಸಿ ಮಾರ್ಗಸೂಚಿಯಲ್ಲಿ ಪರಿಶೀಲಿಸಲು ಉಪಸಮಿತಿ ರಚಿಸುವ ನಿರ್ಣಯ ಕೈಗೊಳ್ಳಲಾಯಿತು.