5612 ಕಿಮೀ ರಸ್ತೆ ಅಭಿವೃದ್ಧಿ: ಸಚಿವ ಈಶ್ವರಪ್ಪ

ಬೆಂಗಳೂರು: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತದಲ್ಲಿ ಮುಖ್ಯ ರಸ್ತೆ, ಪ್ರಮುಖ ಕೂಡು ರಸ್ತೆಗಳ ಬಲವರ್ಧನೆ ಮತ್ತು ನವೀಕರಣಕ್ಕಾಗಿ ರಾಜ್ಯದ 5612.50 ಕಿಮೀ ರಸ್ತೆಯನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸದ್ಯ ಹಂಚಿಕೆಯಾಗಿರುವ 5612.50 ಕಿಮೀ ರಸ್ತೆ ಕಾಮಗಾರಿಗೆ ಕೇಂದ್ರದಿಂದ ಶೇ. 60ರಷ್ಟು ಹಾಗೂ ರಾಜ್ಯ ಸರ್ಕಾರ ಶೇ. 40ರಷ್ಟು ಅನುದಾನ ಸಿಗಲಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 445 ರಸ್ತೆ ಕಾಮಗಾರಿ ಹಾಗೂ 26 ಉದ್ದದ ಸೇತುವೆ ಒಳಗೊಂಡ 3226.21 ಕಿಮೀ ಉದ್ದದ ಗ್ರಾಮೀಣ ರಸ್ತೆಗಳ ಕಾಮಗಾರಿಗೆ 2729.66 ಕೋಟಿ ರೂ. ಅನುಮೋದನೆ ನೀಡಲಾಗಿದೆ. ಮೊದಲ ಹಂತದ ಎಲ್ಲ ರಸ್ತೆ, ಸೇತುವೆ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಉಳಿದಿರುವ 2410.93 ಕಿಮೀ ಉದ್ದದ ರಸ್ತೆ ಕಾಮಗಾರಿಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ನಿರೀಕ್ಷೆಯಲ್ಲಿದೆ ಎಂದರು.
ನರೇಗಾದಲ್ಲಿ 13 ಕೋಟಿ ಮಾನವ ದಿನ
ಮಹಾತ್ಮಗಾಂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪ್ರಸಕ್ತ ಸಾಲಿನಲ್ಲಿ 13 ಕೋಟಿ ಮಾನವ ದಿನಗಳ ಗುರಿ ನೀಡಲಾಗಿದ್ದು, 9.32 ಕೋಟಿ ಮಾನವ ದಿನಗಳ ಕೆಲಸ ಮಾಡಲಾಗಿದೆ. ವಾರ್ಷಿಕ ಗುರಿಯ ಶೇ. 72.68ರಷ್ಟು ಸಾಸಲಾಗಿದೆ. ಈ ವರ್ಷ ನರೇಗಾ ಯೋಜನೆಯಲ್ಲಿ 44.86 ಲಕ್ಷ ಕಾರ್ಮಿಕರಿಗೆ ಕೆಲಸ ಒದಗಿಸಲಾಗಿದೆ. ಕೂಲಿಗಾಗಿ 2499.18 ಕೋಟಿ, ಸಾಮಗ್ರಿಗಳಿಗಾಗಿ 609.65 ಕೋಟಿ ಸೇರಿದಂತೆ ಒಟ್ಟು 3,155.05 ಕೋಟಿ ರೂ. ವಿನಿಯೋಗಿಸಲಾಗಿದೆ. ಅಕ್ಟೋಬರ್, ನವೆಂಬರ್‍ನಲ್ಲಿ ಕಂದಕ, ಬದು ನಿರ್ಮಾಣ, ಕೃಷಿ ಹೊಂಡ, ದನದ ಕೊಟ್ಟಿಗೆ, ಬಚ್ಚಲು ಗುಂಡಿ, ರಸ್ತೆ ಬದಿ ನೆಡು ತೋಪು, ಬ್ಲಾಕ್ ಪ್ಲಾಂಟೇಷನ್ ಕಾಮಗಾರಿ ಸೇರಿದಂತೆ ಪ್ರಸಕ್ತ ವರ್ಷದಲ್ಲಿ 8.3 ಲಕ್ಷ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಅಂತರ್ಜಲ ಚೇತನ ಕಾರ್ಯಕ್ರಮದಲ್ಲಿ ಶೇ. 65ರಷ್ಟು ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗೆ ಹಾಗೂ ಶೇ. 60ರಷ್ಟು ಆರ್ಥಿಕ ವೆಚ್ಚವನ್ನು ಕೃಷಿ ಮತ್ತು ಕೃಷಿ ಸಂಬಂತ ಚಟುವಟಿಕೆಗಳಿಗೆ ವಿನಿಯೋಗಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ