ನಗರದಲ್ಲಿ ಅಕ್ರಮವಾಗಿ ನೆಲೆಸಿರುವ 65 ವಿದೇಶಿ ಪ್ರಜೆಗಳ ಮನೆಗಳ ಮೇಲೆ ಸಿಸಿಬಿ ಪೊಲೀಸರು ಏಕ ಕಾಲಕ್ಕೆ ದಾಳಿ

Close-up Of Gavel And Passport In Front Of Law Book

ಬೆಂಗಳೂರು, ಜು.15- ನಗರದಲ್ಲಿ ಅಕ್ರಮವಾಗಿ ನೆಲೆಸಿರುವ 65 ವಿದೇಶಿ ಪ್ರಜೆಗಳ ಮನೆಗಳ ಮೇಲೆ ಸಿಸಿಬಿ ಪೊಲೀಸರು ಏಕ ಕಾಲಕ್ಕೆ ಮುಂಜಾನೆಯಿಂದಲೇ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ 38 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದು, ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ಒಬ್ಬರು ಡಿಸಿಪಿ, 6 ಮಂದಿ ಎಸಿಪಿಗಳು, 20 ಮಂದಿ ಇನ್ಸ್‍ಪೆಕ್ಟರ್‍ಗಳು, 100 ಕ್ಕೂ ಹೆಚ್ಚು ಕಾನ್ಸ್‍ಟೇಬಲ್ ಮತ್ತು ಹೆಡ್‍ಕಾನ್ಸ್‍ಟೇಬಲ್‍ಗಳು ದಾಳಿ ನಡೆಸಿದ್ದಾರೆ.

ಒಬ್ಬರ ಮನೆಯಲ್ಲಿ 90 ಎಕ್ಸ್‍ಟೆನ್ಸಿ ಮಾತ್ರೆಗಳು, ಮತ್ತೊಬ್ಬರ ಮನೆಯಲ್ಲಿ 25 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಎಕ್ಸ್‍ಟೆನ್ಸಿ ಮಾತ್ರೆಗಳನ್ನು ಇಟ್ಟುಕೊಂಡಿದ್ದ ಆರೋಪಿಯ ವಿರುದ್ಧ ಈ ಹಿಂದೆ ಡ್ರಗ್ ದಂಧೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸಿಕ್ಕಿ ಬಿದ್ದಿರುವುದು ಮೂರನೆ ಬಾರಿ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

38 ಮಂದಿಯಲ್ಲಿ ಕೆಲವರ ಬಳಿಯಲ್ಲಿ ಅಗತ್ಯ ದಾಖಲೆಗಳಿಲ್ಲ. ಇನ್ನು ಕೆಲವರು ವೀಸಾ, ಪಾಸ್‍ಪೋರ್ಟ್ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದಾರೆ. ಈ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಸಿಸಿಬಿ ಪೊಲೀಸರು ಡ್ರಗ್ಸ್ ನಿರ್ಮೂಲನೆಗೆ ನಿರಂತರ ಕಾರ್ಯಾಚರಣೆ ಮುಂದುವರೆಸುತ್ತಿದ್ದು, ನಗರದಲ್ಲಿ ಅನಧಿಕೃತವಾಗಿ ನೆಲೆಸಿರುವ ಕೆಲ ವಿದೇಶಿಯರು ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿರುವುದು ಈ ಹಿಂದಿನ ಪ್ರಕರಣಗಳ ತನಿಖೆಯಲ್ಲಿ ತಿಳಿದು ಬಂದಿರುವುದರಿಂದ ಇದನ್ನು ಮಟ್ಟ ಹಾಕುವ ಉದ್ದೇಶದಿಂದ ಈ ದಾಳಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅನಧಿಕೃತವಾಗಿ ವಾಸವಾಗಿದ್ದ ವಿದೇಶಿಯರ ಹಾಗೂ ಡ್ರಗ್ಸ್ ಹೊಂದಿದ್ದ ವ್ಯಕ್ತಿಗಳ ವಿರುದ್ಧ ಫಾರಿನ್ ಆ್ಯಕ್ಟ್ ಹಾಗೂ ಎನ್‍ಡಿಪಿಎಸ್ ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ