ಹೊಸದಿಲ್ಲಿ: ಕೊರೋನಾ ಲಸಿಕೆ ಮಾಹಿತಿ, ಕಾರ್ಯನಿರ್ವಹಣೆ ಕುರಿತು ಜನಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಿಳಿ ಹೇಳಬೇಕಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಜ್ಞಾನಿಗಳಿಗೆ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೋವಿಡ್-19 ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಭಾರತೀಯ ವಿಜ್ಞಾನಿಗಳೊಂದಿಗೆ ಸೋಮವಾರ ವರ್ಚೂವಲ್ ಮೂಲಕ ಸಂವಾದ ನಡೆಸಿದರು. ಕೊರೋನಾ ವೈರಸ್ ಬಿಕ್ಕಟ್ಟಿನ ಪರಿಹಾರಕ್ಕೆ ಶ್ರಮಿಸುತ್ತಿರುವ ಪ್ರಯತ್ನವನ್ನು ಅವರು ಶ್ಲಾಘಿಸಿದರು.
ಕೊರೋನಾ ಲಸಿಕೆ ಉತ್ಪಾದನೆ ಮತ್ತು ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿರುವ ಪುಣೆಯ ಜೆನ್ನೊವಾ ಬಯೋಫಾರ್ಮಾಸುಟಿಕಲ್ಸ್ , ಹೈದರಾಬಾದ್ನ ಬಯೋಲೊಜಿಕಲ್ ಇ ಮತ್ತು ಡಾ.ರೆಡ್ಡೀಸ್ ಲ್ಯಾಬರೋಟರೀಸ್ ಸಂಸ್ಥೆಯ ವಿಜ್ಞಾನಿಗಳ ಮೂರು ತಂಡದ ಜತೆ ಪ್ರಧಾನ ಮಂತ್ರಿಯವರು ಸಭೆ ನಡೆಸಿದರು.
ಕೊರೋನಾ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಅಹಮದಾಬಾದ್, ಹೈದರಾಬಾದ್, ಪುಣೆಯ ಔಷಧ ಕಂಪನಿಗಳಿಗೆ ಪ್ರಧಾನಿಯವರು ಭೇಟಿ ನೀಡಿದ ಎರಡು ದಿನಗಳ ಈ ಸಭೆ ನಡೆದಿದೆ.
ಕೊರೋನಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಮರ್ಪಕ ಲಸಿಕೆ ಉತ್ಪಾದನೆಯ ಕುರಿತ ವಿಜ್ಞಾನಿಗಳ ತಂಡದ ಪ್ರಯತ್ನವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಲಸಿಕೆ ಅಭಿವೃದ್ಧಿಯ ನಾನಾ ಸಾಧ್ಯತೆಗಳ ಕುರಿತಾಗಿಯೂ ವಿಜ್ಞಾನಿಗಳೊಂದಿಗೆ ಚರ್ಚೆ ನಡೆಸಿದರು.
ಜನಸಾಮಾನ್ಯರಿಗೆ ಲಸಿಕೆಯ ಕುರಿತ ಮಾಹಿತಿ, ಅದರ ಕಾರ್ಯನಿರ್ವಹಣೆ ಬಗ್ಗೆ ಸರಳ ಭಾಷೆಯಲ್ಲಿ ನೀಡುವ ಅಗತ್ಯವಿದ್ದು ಅದಕ್ಕಾಗಿ ಹೆಚ್ಚಿನ ಪ್ರಯತ್ನ ನಡೆಸಬೇಕಿದೆ ಎಂದು ಮೋದಿಯವರು ಸಂವಾದದಲ್ಲಿ ತಿಳಿಸಿದರು. ಲಸಿಕೆಯ ನಿಯಂತ್ರಣ ಕ್ರಮಗಳು ಮತ್ತು ಸಂಬಂತ ಪ್ರಕ್ರಿಯೆಗಳ ಕುರಿತು ಔಷಧ ಕಂಪನಿಗಳು ಅಭಿಪ್ರಾಯಗಳು ಹಾಗೂ ಯೋಜನೆಗಳನ್ನು ತಿಳಿಸಬೇಕೆಂದು ಅವರು ಕೋರಿದರು.