ಹೊಸದಿಲ್ಲಿ: ಬಿಹಾರ ಹಾಗೂ 11 ರಾಜ್ಯಗಳಲ್ಲಿ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಪ್ರದರ್ಶನ ಕುರಿತು ಸ್ವಪಕ್ಷದಲ್ಲೇ ಭಿನ್ನಮತ, ಅಸಮಾಧಾನ ಉಲ್ಬಣವಾಗಿದ್ದು, ಉಪಚುನಾವಣೆಯಲ್ಲಿ ಸೋತಿದ್ದು ನಾವು ಸ್ಥಳೀಯ ಮಟ್ಟದಲ್ಲಿ ಸಾಂಸ್ಥಿಕವಾಗಿ ದುರ್ಬಲವಾಗಿರುವುದಕ್ಕೆ ನಿದರ್ಶನ ಎಂದು ಪಕ್ಷದ ಹಿರಿಯ ನಾಯಕ ಪಿ.ಚಿದಂಬರಂ ಹೇಳಿದ್ದಾರೆ.
ಸೋಲಿನ ಆತ್ಮಾವಲೋಕನ ಅಗತ್ಯ ಎಂದು ಕಪಿಲ್ ಸಿಬಲ್, ಸೈದ್ಧಾಂತಿಕವಾಗಿ ಬಲಿಷ್ಠವಾಗದಿದ್ದರೆ ಗಂಟುಮುಟೆ ಕಟ್ಟಬೇಕಾಗುತ್ತದೆ ಎಂದು ಸಲ್ಮಾನ್ ಖುರ್ಷಿದ್ ಹೇಳಿದ ಬೆನ್ನಲ್ಲೇ ಈಗ ಕಟ್ಟಾ ಕಾಂಗ್ರೆಸ್ಸಿಗ ಪಿ.ಚಿದಂಬರಂ ಸಹ ಸೋಲಿನ ಕುರಿತು ವಿಮರ್ಶೆ ಮಾಡಿರುವುದು ಕಾಂಗ್ರೆಸ್ಸಿಗೆ ಆದ ಮತ್ತೊಂದು ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ಸೇರಿ ಹಲವು ರಾಜ್ಯಗಳ ಉಪಚುನಾವಣೆಯಲ್ಲಿ ಪಕ್ಷ ತೋರಿದ ಪ್ರದರ್ಶನವು ಚಿಂತೆಗೀಡು ಮಾಡಿದೆ. ಇದು ಸ್ಥಳೀಯ ಮಟ್ಟದಲ್ಲಿ ಸಾಂಸ್ಥಿಕ ಪ್ರದರ್ಶನದ ಕೊರತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಬಿಹಾರದಲ್ಲಿ ಆರ್ಜೆಡಿ ಮೈತ್ರಿಕೂಟ ಗೆಲುವಿನ ಸನಿಹದಲ್ಲಿತ್ತು. ಆದರೆ, ಎನ್ಡಿಎ ಮೇಲುಗೈ ಸಾಸಿತು. ಪ್ರಾದೇಶಿಕ ಪಕ್ಷಗಳು ಸಹ ಹಲವು ರಾಜ್ಯದಲ್ಲಿ ತಳಮಟ್ಟದಲ್ಲಿ ಗಟ್ಟಿಯಾಗುತ್ತಿವೆ. ಇದರ ಕೊರತೆಯಿಂದ ನಾವು ಸೋತಿದ್ದೇವೆ. ಮುಂದಿನ ದಿನಗಳಲ್ಲಿ ಸ್ಥಳೀಯ ಮಟ್ಟದಲ್ಲಿ ನಾವು ಗಟ್ಟಿಯಾಗಬೇಕಾಗಿರುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.