ಸೀರಮ್ ಇನ್‍ಸ್ಟಿಟ್ಯೂಟ್‍ಗೆ ನಾಳೆ ಪ್ರಧಾನಿ ಭೇಟಿ

ಹೊಸದಿಲ್ಲಿ ;ಕೊರೋನಾ ವಿರುದ್ಧದ ಲಸಿಕೆ ಸಂಗ್ರಹಿಸಲು ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಿದ್ಧತೆ ನಡೆಸಿಕೊಳ್ಳುವಂತೆ ತಿಳಿಸಿದ್ದ ಬೆನ್ನಲ್ಲೆ, ಪ್ರಧಾನಿ ನರೇಂದ್ರ ಮೋದಿ ಶನಿವಾರ ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‍ಐಐ)ಗೆ ಭೇಟಿ ನೀಡಿ, ಲಸಿಕೆ ಉತ್ಪಾದನೆ ಹಾಗೂ ಹಂಚಿಕೆ ವಿಚಾರ ಕುರಿತು ಚರ್ಚೆ ನಡೆಸಲು ಯೋಜಿಸಿದ್ದಾರೆ ಎಂದು ತಿಳಿದುಬಂದಿದೆ.
ದೇಶದ ಎಲ್ಲರಿಗೂ ಲಸಿಕೆ ದೊರಕಿಸಿ ಕೊಡುವ ಭರವಸೆ ನೀಡಿದ್ದ ಪ್ರಧಾನಿ,ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.ಈ ನಡುವೆಯೇ ಸೀರಮ್ ಇನ್‍ಸ್ಟಿಟ್ಯೂಟ್ ಭೇಟಿ ಯೋಜನೆಯೂ ಲಸಿಕೆ ಶೀಘ್ರವೇ ದೊರೆಯಲಿದೆ ಎಂಬ ಆಶಾಭಾವನೆ ಮೂಡಿಸಿದೆ.
ನ.28ರಂದು ಎಸ್‍ಐಐಗೆ ಭೇಟಿ ನೀಡಲಿರುವುದರ ಬಗ್ಗೆ ನಮಗೆ ಅಕೃತ ಮಾಹಿತಿ ದೊರೆತಿದ್ದು, ಇದಕ್ಕಾಗಿ ಆಡಳಿತ ಪೂರ್ವಭಾವಿ ಸಭೆಗಳನ್ನೂ ನಡೆಸಿದೆ. ಲಸಿಕೆ ಅಭಿವೃದ್ಧಿ ಪಡಿಸುತ್ತಿರುವ ಸಂಸ್ಥೆಯ ಕ್ಯಾಂಪಸ್ ವಿವಿಧ ಸೌಲಭ್ಯಗಳನ್ನು ಪ್ರಧಾನಿ ಪರಿಶೀಲಿಸಲಿದ್ದಾರೆ ಎಂದು ಪುಣೆ ವಿಭಾಗೀಯ ಆಯುಕ್ತ ಸೌರವ್ ರಾವ್ ಹೇಳಿದ್ದಾರೆ.
ಅಲ್ಲದೆ,ಡಿಸೆಂಬರ್ 4ರಂದು ಎಸ್‍ಐಐಗೆ ವಿವಿಧ ದೇಶದ ರಾಯಭಾರಿಗಳು ಹಾಗೂ ಹೈ ಕಮಿಷನರ್‍ಗಳು ಭೇಟಿ ನೀಡಲು ಯೋಜಿಸಿದ್ದು, ಇದಕ್ಕೂ ಮುನ್ನ ಸಂಸ್ಥೆಯ ವಿತರಣಾ ಯೋಜನೆಯ ಮೇಲ್ವಿಚಾರಣೆ ನಡೆಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಜತೆಗೆ ಲಸಿಕೆ ಸೋಂಕಿತನ ಮೇಲೆ ಬೀರುವ ಪರಿಣಾಮ, ಲಸಿಕೆ ಪಡೆದವರ ಸ್ಥಿತಿ, ಉತ್ಪಾದನೆ ಹಾಗೂ ವಿತರಣಾ ಕಾರ್ಯವಿಧಾನ ತಿಳಿದುಕೊಳ್ಳುವ ಉದ್ದೇಶವನ್ನು ಪ್ರಧಾನಿ ಹೊಂದಿದ್ದಾರೆಂದು ರಾವ್ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ