ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಹತ್ವದ ಘೋಷಣೆ ಮ.ಪ್ರ.ದಲ್ಲಿ ಗೋ ರಕ್ಷಣೆಗೆ ಗೋ ಸಚಿವಾಲಯ

ಭೋಪಾಲ್: ಮಧ್ಯಪ್ರದೇಶದಲ್ಲಿ ಲವ್ ಜಿಹಾದ್ ತಡೆಗೆ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರ ತೀರ್ಮಾನಿಸಿದ ಬೆನ್ನಲ್ಲೇ ಗೋವುಗಳ ರಕ್ಷಣೆಗಾಗಿ ಗೋ ಸಚಿವಾಲಯ ರಚಿಸಲು ತೀರ್ಮಾನಿಸಿದೆ.
ರಾಜ್ಯದಲ್ಲಿ ಗೋವುಗಳ ರಕ್ಷಣೆ ಹಾಗೂ ಅವುಗಳ ಸಾಕಣೆಗೆ ಉತ್ತೇಜನ ನೀಡುವ ದಿಸೆಯಲ್ಲಿ ಗೋ ಸಚಿವಾಲಯ ರಚಿಸಲಾಗಿದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಪಶು ಸಂಗೋಪನೆ, ಅರಣ್ಯ, ಪಂಚಾಯತ್ ಹಾಗೂ ಗ್ರಾಮೀಣ ಅಭಿವೃದ್ಧಿ, ಆದಾಯ, ವಸತಿ ಹಾಗೂ ರೈತರ ಕಲ್ಯಾಣ ಇಲಾಖೆಗಳು ಸಹ ಗೋ ಸಚಿವಾಲಯದ ಭಾಗವಾಗಲಿವೆ. ಗೋಮಾತೆಯ ರಕ್ಷಣೆಯೇ ಇದರ ಉದ್ದೇಶ ಎಂದು ಕೃಷಿ ಸಚಿವ ಕಮಲ್ ಪಟೇಲ್ ಮಾಹಿತಿ ನೀಡಿದ್ದಾರೆ.
ಗೋವುಗಳ ರಕ್ಷಣೆಯೇ ಮುಖ್ಯಮಂತ್ರಿಯವರ ಘನ ಉದ್ದೇಶವಾಗಿದ್ದು, ಈ ದಿಸೆಯಲ್ಲಿ ಅಗರ್ ಮಾಲ್ವಾ ಜಿಲ್ಲೆಯ ಗೋಧಾಮದಲ್ಲಿ ನವೆಂಬರ್ 22ರ ಮಧ್ಯಾಹ್ನ 12 ಗಂಟೆಗೆ ಮೊದಲ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯಾದ್ಯಂತ ಗೋವುಗಳ ರಕ್ಷಣೆಗಾಗಿ 4 ಸಾವಿರ ಗೋಶಾಲೆಗಳನ್ನು ಸ್ಥಾಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಆದರೆ, ಇದರ ಪ್ರಮುಖ ಜವಾಬ್ದಾರಿ, ಉಸ್ತುವಾರಿ ಹಾಗೂ ವಿನಿಯೋಗಿಸುವ ಹಣದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ