ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಹೂತಪೂರ್ವ ಗೆಲುವು ಸಾಧಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಎರಡನೆ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದು, ಈ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಮತ್ತು ಎನ್ಡಿಎ ಮೈತ್ರಿಕೂಟದ ಸಂಸದೀಯ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು.
ಲೋಕಸಭಾ ಚುನಾವಣೆಯ ಸ್ಪಷ್ಟ ಫಲಿತಾಂಶ ಬಂದ ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ನರೇಂದ್ರ ಮೋದಿ ಅವರನ್ನು ಎರಡನೇ ಬಾರಿಗೆ ಸಂಸದೀಯ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಈ ಮೂಲಕ ಮೋದಿ ಎರಡನೇ ಬಾರಿಗೆ ಪ್ರಧಾನಿ ಪಟ್ಟ ಅಲಂಕರಿಸಲಿದ್ದಾರೆ.
ಮೊದಲಿಗೆ ಬಿಜೆಪಿ ಸಂಸದೀಯ ನಾಯಕರನ್ನಾಗಿ ಮೋದಿ ಅವರ ಹೆಸರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಸ್ತಾಪಿಸಿದರು. ಇದಕ್ಕೆ ಹಿರಿಯ ನಾಯಕರಾದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಅನುಮೋದಿಸಿದರು.
ನಂತರ ಎನ್ಡಿಎ ಮೈತ್ರಿಕೂಟದ ನಾಯಕರಾಗಿ ಮೋದಿ ಹೆಸರನ್ನು ಪ್ರಕಾಶ್ ಸಿಂಗ್ ಬಾದಲ್ ಪ್ರಸ್ತಾಪಿಸಿದರು. ಇದಕ್ಕೆ ನಿತೀಶ್ ಕುಮಾರ್, ಉದ್ಧವ್ ಠಾಕ್ರೆ, ರಾಮ್ವಿಲಾಸ್ ಪಾಸ್ವಾನ್, ಎಡಪ್ಪಾಡಿ ಪಳನಿಸ್ವಾಮಿ ಅನುಮೋದನೆ ನೀಡಿದರು.
ಇದಕ್ಕೆ ಸಭೆಯಲ್ಲಿ ಒಕ್ಕೊರಲ ಬೆಂಬಲ ವ್ಯಕ್ತವಾಯಿತು. ಸಭೆಯಲ್ಲಿ ಹಾಜರಿದ್ದ ಎಲ್ಲ ಸಂಸದರು ಚಪ್ಪಾಳೆಯ ಮೂಲಕ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದರು.
Narendra Modi,Elected,NDA Leader