ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟ

ಬೆಂಗಳೂರು,ಮೆ 25-ಕರ್ನಾಟಕ ಪರೀಕ್ಷಾ ಪ್ರಾಧಿಕಾರ 19ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ್ದು, ಜೂನ್ 6ರಿಂದ ದಾಖಲಾತಿಗಳ ಪರಿಶೀಲನೆಯನ್ನು ಆರಂಭಿಸಲಿದೆ.
ಇಂಜಿನಿಯರಿಂಗ್, ನ್ಯಾಚುರೋಪತಿ, ಯೋಗ ವಿಜ್ಞಾನ, ಬಿಎಸ್ಸಿ ಕೃಷಿ, ಪಶು ವೈದ್ಯಕೀಯ, ಬಿ ಫಾರ್ಮ, ಡಿ ಫಾರ್ಮ ಕೋರ್ಸ್‍ಗಳ ಪ್ರವೇಶಕ್ಕಾಗಿ ಕಳೆದ ಏ.29 ಮತ್ತು 30ರಂದು ರಾಜ್ಯದ 431 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.

1,94,308 ಮಂದಿ ಅರ್ಜಿ ಸಲ್ಲಿಸಿ ಅದರಲ್ಲಿ 1,80,315 (ಶೇ. 92.79ರಷ್ಟು) ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಅದರಲ್ಲಿ ಇಂಜಿನಿಯರಿಂಗ್‍ಗೆ 1,46,957, ಬಿಎಸ್ಸಿ ಕೃಷಿಗೆ 1,03,394, ನ್ಯಾಚುರೋಪತಿ ಯೋಗ ವಿಜ್ಞಾನಕ್ಕೆ, 1,17,947 ಮತ್ತು ಪಶುವೈದ್ಯಕೀಯಕ್ಕೆ 1,18,045, ಬಿ ಫಾರ್ಮಗೆ 1,46,546, ಡಿ ಫಾರ್ಮಗಳಿಗೆ 1,46,759 ವಿದ್ಯಾರ್ಥಿಗಳು ರ್ಯಾಂಕಿಂಗ್ ಪಡೆದಿದ್ದಾರೆ ಎಂದು ಸಚಿವ ಜಿ.ಟಿ.ದೇವೇಗೌಡ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದರು.

ಇಂಜಿನಿಯರಿಂಗ್ ವಿಭಾಗದಲ್ಲಿ, ಮಾರತಹಳ್ಳಿಯ ಚೈತನ್ಯ ಟೆಕ್ನೊ ಕಾಲೇಜಿನ ಜಫಿನ್ ಬಿಜು ಮೊದಲ ಸ್ಥಾನ ಪಡೆದಿದ್ದಾರೆ. ಮೊದಲ 10 ಸ್ಥಾನಗಳಲ್ಲಿ ಬೆಂಗಳೂರಿನ ಏಳು, ಮಂಗಳೂರಿನ 2, ಬಳ್ಳಾರಿಯ ಒಬ್ಬ ವಿದ್ಯಾರ್ಥಿ ರ್ಯಾಂಕ್ ಗಳಿಸಿದ್ದಾರೆ.

ನ್ಯಾಚರಿಪತಿ ಮತ್ತು ಯೋಗ ವಿಜ್ಞಾನ ವಿಭಾಗದಲ್ಲಿ ಚೈತನ್ಯ ಟೆಕ್ನೋ ಪಿಯು ಕಾಲೇಜಿನ ಮಹೇಶ್‍ಆನಂದ್ ಮೊದಲ ಸ್ಥಾನಪಡೆದರೆ, ಬೆಂಗಳೂರಿನ 6 , ಮಂಗಳೂರಿನ 2, ಮೈಸೂರು ಮತ್ತು ದಾವಣಗೆರೆ ತಲಾ ಒಬ್ಬರು ವಿದ್ಯಾರ್ಥಿಗಳು ಮೊದಲ 10ನೇ ರ್ಯಾಂಕ್‍ಗಳನ್ನು ಪಡೆದಿದ್ದಾರೆ.

ಬಿಎಸ್ಸಿ ಕೃಷಿ ವಿಭಾಗದಲ್ಲಿ ಬೆಂಗಳೂರಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನ ಕೀರ್ತನ. ಎಂ. ಅರುಣ್ ಮೊದಲ ಸ್ಥಾನ ಪಡೆದರೆ, ಬೆಂಗಳೂರಿನ ಮೂವರು, ಮಂಗಳೂರಿನ ನಾಲ್ವರು, ಮೈಸೂರು, ಹಾಸನ, ಶಿವಮೊಗ್ಗದ ತಲಾ ಒಬ್ಬ ವಿದ್ಯಾರ್ಥಿಗಳು ಮೊದಲ 10ನೇ ರ್ಯಾಂಕ ಪಡೆದಿದ್ದಾರೆ.

ಪಶುವೈದ್ಯಕೀಯ ವಿಭಾಗದಲ್ಲಿ ಶ್ರೀ ಚೈತನ್ಯ ಟೆಕ್ನೋ ಕಾಲೇಜಿನ ಪಿ.ಮಹೇಶ್ ಆನಂದ್ ಮೊದಲ ರ್ಯಾಂಕ್ ಪಡೆದರೆ, ಬೆಂಗಳೂರಿನ ಮೂರು, ಮೈಸೂರಿನ ನಾಲ್ಕು, ಹಾಸನದ ಒಂದು, ಶಿವಮೊಗ್ಗದ ಒಬ್ಬ ವಿದ್ಯಾರ್ಥಿ ಮೊದಲ 10 ಸ್ಥಾನ ಪಡೆದಿದ್ದಾರೆ.

ಬಿ ಫಾರ್ಮ ಮತ್ತು ಡಿ ಫಾರ್ಮದಲ್ಲಿ ಶ್ರೀ ಚೈತನ್ಯ ಟೆಕ್ನೋ ಕಾಲೇಜಿನ ಕುಮಾರಿ ಸಾಯಿ ಸಾಕೇತಿಕ ಚಕುರಿ ಮೊದಲ ರ್ಯಾಂಕ್ ಪಡೆದರೆ ಬೆಂಗಳೂರಿನ 7, ಮಂಗಳೂರು, ಮೈಸೂರು, ಬಳ್ಳಾರಿಯ ತಲಾ ಒಬ್ಬರು ವಿದ್ಯಾರ್ಥಿಗಳು ಮೊದಲ 10ನೇ ರ್ಯಾಂಕ್ ಪಡೆದಿದ್ದಾರೆ.

ಮಾರತಹಳ್ಳಿಯ ಚೈತನ್ಯ ಟೆಕ್ನೋ ಕಾಲೇಜಿನ ಮೂವರು ವಿದ್ಯಾರ್ಥಿಗಳು ಮೊದಲ ರ್ಯಾಂಕ್ ಪಡೆದರೆ, ಅದರಲ್ಲಿ ಪಿ.ಮಹೇಶ್ ಆನಂದ್ ಪಶುವೈದ್ಯಕೀಯ ಮತ್ತು ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಎರಡೂ ವಿಭಾಗದಲ್ಲೂ ಪ್ರಥಮ ರ್ಯಾಂಕ್ ಪಡೆದಿದ್ದಾರೆ.

ಇಂದು ಮಧ್ಯಾಹ್ನ ನಂತರ ಫಲಿತಾಂಶ ವೆಬ್‍ಸೈಟ್‍ನಲ್ಲಿ ಲಭ್ಯವಾಗಲಿದ್ದು, ವೆಬ್‍ಸೈಟ್<http://kea.kar.nic.in>, <http://cet.kar.nic.in>, <http://karresults.nic.in> ಫಲಿತಾಂಶ ವೀಕ್ಷಸಬಹುದು.

ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಜೂ.6ರಿಂದ ದಾಖಲಾತಿಗಳ ಪರಿಶೀಲನೆ ಆರಂಭಗೊಳ್ಳಲಿದೆ. ಬೆಂಗಳೂರು ನಗರ/ಗ್ರಾಮಾಂತರ ಜಿಲ್ಲೆಯವರೆಗೆ ಬೆಂಗಳೂರಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆವರಣದಲ್ಲಿ ದಾಖಲಾತಿಗಳ ಪರಿಶೀಲನೆ ನಡೆಯಲಿದ್ದು, ಉಳಿದ 28 ಜಿಲ್ಲೆಗಳಲ್ಲೂ ಆಯಾ ಭಾಗದಲ್ಲೇ ದಾಖಲಾತಿಗಳ ಪರಿಶೀಲನೆ ನಡೆಯಲಿದೆ.

ಮುಂದಿನ ವರ್ಷದಿಂದ ಆನ್‍ಲೈನ್ ಪರೀಕ್ಷೆ:
ಮುಂದಿನ ವರ್ಷದಿಂದ ಸಿಇಟಿಯನ್ನು ಆನ್‍ಲೈನ್‍ನಲ್ಲೇ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ನೆರೆ ರಾಜ್ಯ ಮತ್ತು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಆನ್‍ಲೈನ್ ಮೂಲಕವೇ ಸಿಇಟಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಹಲವಾರು ಸುತ್ತಿನ ಅಣಕು ಪರೀಕ್ಷೆಗಳನ್ನು ನಡೆಸಲಾಗುವುದು. ಅದರಲ್ಲಿ ಎಷ್ಟು ಬಾರಿ ಬೇಕಾದರೂ ವಿದ್ಯಾರ್ಥಿಗಳು ಭಾಗವಹಿಸಬಹುದು. ಗ್ರಾಮೀಣಾ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪಿಯುಸಿ ಮತ್ತು ಡಿಗ್ರಿ ಕಾಲೇಜುಗಳಲ್ಲಿ ಪರೀಕ್ಷಾಕೇಂದ್ರಗಳನ್ನು ತೆಗೆಯಲಾಗುವುದು. ಆನ್‍ಲೈನ್ ಪರೀಕ್ಷೆಯ ಪೂರ್ವ ಸಿದ್ದತೆಗಾಗಿ ಈಗಾಗಲೇ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ ಜೊತೆ ಚರ್ಚೆ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ನೋಡಿಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಸಿಇಟಿಯಲ್ಲಿ ಎಲ್ಲಾ ವಿಧಧ ಮೊದಲ ಐದು ಟಾಪ್ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಕಾಲೇಜು ಪ್ರವೇಶ ಶುಲ್ಕವನ್ನು ಪ್ರಾಧಿಕಾರ ಮರುಪಾವತಿಸಲಿದೆ ಎಂದು ತಿಳಿಸಿದರು.

ಇಂಜಿನಿಯರಿಂಗ್ ಪ್ರವೇಶ ಶುಲ್ಕ ಶೇ.10ರಷ್ಟು ಹೆಚ್ಚಳ:
ಈ ಬಾರಿ ಕಳೆದ ವರ್ಷಕ್ಕಿಂತಲೂ ಶೇ.10ರಷ್ಟು ಇಂಜಿನಿಯರಿಂಗ್ ಪರೀಕ್ಷಾ ಶುಲ್ಕವನ್ನು ಹೆಚ್ಚಿಸಲಾಗಿದೆ. ಶುಲ್ಕ ನಿಗದಿಗಾಗಿ ರಚಿಸಿದ್ದ ಸಮಿತಿಯ ಕುರಿತು ಹೈಕೊರ್ಟ್‍ನಲ್ಲಿ ತಕರಾರು ಇದೆ. ನಾವು ಹಿಂದಿನ ಸಮಿತಿಯಲ್ಲೇ ಚರ್ಚಿಸಿ ನಿರ್ಧಾರ ತೆಗೆದುಕೊಂಡು ಸರ್ಕಾರ ಶೇ.10ರಷ್ಟು ಶುಲ್ಕವನ್ನು ಹೆಚ್ಚಿಸಿದ್ದೇವೆ ಎಂದರು.

ಶೇ.10ರಷ್ಟು ಮೀಸಲಾತಿ ಜಾರಿ:
ಕೇಂದ್ರ ಸರ್ಕಾರ ಮೇಲ್ವರ್ಗದವರಿಗೆ ಜಾರಿಗೊಳಿಸಿರುವ ಶೇ.10ರಷ್ಟು ಮೀಸಲಾತಿ ಜಾರಿಗೆ ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಾ ತೆಗೆದುಕೊಂಡಿದ್ದು, ವೃತ್ತಿಪರ ಕೋರ್ಸ್‍ಗಳ ಪ್ರವೇಶದಲ್ಲಿ ಇದನ್ನು ಜಾರಿಗೊಳಿಸಲಾಗುವುದು.

ಈಗಾಗಲೇ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳು ಸೇರಿ ಶೇ.50ರಷ್ಟು ಮೀಸಲಾತಿ ಜಾರಿಯಲ್ಲಿದೆ. ಮೇಲ್ವರ್ಗದ ಮೀಸಲಾತಿಯು ಒಳಗೊಂಡರೆ ಶೇ.60ರಷ್ಟು ಮೀಸಲಾತಿ ಪ್ರಮಾಣವಾಗಲಿದೆ. ಉಳಿದ 40ರಷ್ಟು ಸಾಮಾನ್ಯ ವರ್ಗದ ಸೀಟುಗಳು ಇರಲಿವೆ.

ಗೋಷ್ಠಿಯಲ್ಲಿ ಪರೀಕ್ಷಾ ಪ್ರಾಧಿಕಾರದ ಕಾರ್ಯದರ್ಶಿ ಬಿ.ಎಚ್.ಅನಿಲ್‍ಕುಮಾರ್ ಮತ್ತು ಕಾರ್ಯ ನಿರ್ವಾಹಕ ಅಧಿಕಾರಿ ಗಿರೀಶ್‍ಕುಮಾರ್ ಹಾಜರಿದ್ದರು.

ವೃತ್ತಿಪರ ಕೋರ್ಸ್‍ಗಳ ಪ್ರವೇಶಾತಿಗೆ ದಾಖಲೆ ಪರಿಶೀಲನೆ:
ದಾವಣಗೆರೆಯ ಬಾಪೂಜಿ ಇಂಜಿನಿಯರಿಂಗ್ ಕಾಲೇಜು, ಬಳ್ಳಾರಿಯಲ್ಲಿ ಗೌರ್ಮೆಂಟ್ ಪಾಲಿಟ್ನೆಕಿಕ್ ಕಾಲೇಜು, ರಾಯಚೂರಿನಲ್ಲಿ ಎಚ್‍ಕೆಇಎಸ್‍ಎಲ್‍ಎನ್ ಇಂಜಿನಿಯರಿಂಗ್ ಕಾಲೇಜು, ಕಲಬರುಗಿಯಲ್ಲಿ ಪಿಇಡಿಎ ಕಾಲೇಜು, ವಿಜಯಪುರದಲ್ಲಿ ಬಲದೇವ ಇಂಜಿನಿಯರಿಂಗ್ ಕಾಲೇಜು, ಬೆಳಗಾವಿಯಲ್ಲಿ ಅಂಗಡಿ ಇಂಜಿನಿಯರಿಂಗ್ ಕಾಲೇಜು, ಧಾರವಾಡದಲ್ಲಿ ಧರ್ಮಸ್ಥಳ ಮಂಜುನಾಥೇಶ್ವ ಇಂಜಿನಿಯರಿಂಗ್, ಕಾರವಾರದಲ್ಲಿ ಗೌರ್ನಮೆಂಟ್ ಪಾಲಿಟೆಕ್ನಿಕ್ ಕಾಲೇಜು, ಮಂಗಳೂರಿನಲ್ಲಿ ಸಹ್ಯಾದ್ರಿ, ಶಿವಮೊಗ್ಗದಲ್ಲಿ ಬಿಇಎಸ್ ಕಾಲೇಜು, ಹಾಸನದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಮೈಸೂರಿನಲ್ಲಿ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು, ತುಮಕೂರಿನಲ್ಲಿ ಸಿದ್ದಗಂಗಾ ಇಂಜಿನಿಯರಿಂಗ್ ಕಾಲೇಜು, ಬೀದರ್‍ನಲ್ಲಿ ಬೀದರ್ ಮೆಡಿಕಲ್ ಕಾಲೇಜು, ಕೊಪ್ಪಳದಲ್ಲಿ ಕೊಪ್ಪಳ ಮೆಡಿಕಲ್ ಕಾಲೇಜು, ಚಿತ್ರದುರ್ಗದಲ್ಲಿ ಎಸ್‍ಜೆಎಂ ಇಂಜಿನಿಯರಿಂಗ್ ಕಾಲೇಜು, ಹಾವೇರಿಯಲ್ಲಿ ಗುಡ್ಲಪ್ಪ ಹಳ್ಳಿಕೇರಿ ಪಿಯು ಕಾಲೇಜು, ಗದಗದಲ್ಲಿ ಸರ್ಕಾರಿ ಪಿಯು ಕಾಲೇಜು, ಯಾದಗಿರಿಯಲ್ಲಿ ಸರ್ಕಾರಿ ಬಾಲಕಿಯರ ಇಂಜಿನಿಯರಿಂಗ್ ಕಾಲೇಜು, ಬಾಗಲಕೋಟೆಯಲ್ಲಿ ಬಿವಿವಿಎಸ್ ಪಾಲಿಟೆಕ್ನಿಕ್ ಕಾಲೇಜು, ಉಡುಪಿಯಲ್ಲಿ ಎಸ್‍ಡಿಎಂ ಆರ್ಯುವೇದ ಮೆಡಿಕಲ್ ಕಾಲೇಜು, ಚಿಕ್ಕಮಗಳೂರಿನಲ್ಲಿ ಆದಿಚುಂಚನಗಿರಿ ಇಂಜಿನಿಯರಿಂಗ್ ಕಾಲೇಜು, ಮಡಿಕೇರಿಯಲ್ಲಿ ಸರ್ಕಾರಿ ಪಿಯು ಕಾಲೇಜು, ಚಾಮರಾಜನಗರದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಮಂಡ್ಯದಲ್ಲಿ ಸರ್ಕಾರಿ ಬಾಲಕಿಯರ ಪಿಯು ಕಾಲೇಜು, ರಾಮನಗರದಲ್ಲಿ ಶಾಂತಿನಿಕೇತನ ಶಿಕ್ಷಣ ಸಂಸ್ಥೆ, ಚಿಕ್ಕಬಳ್ಳಾಪುರದಲ್ಲಿ ಎಸ್‍ಜೆಸಿ ಇಂಜಿನಿಯರಿಂಗ್ ಕಾಲೇಜು, ಕೋಲಾರದಲ್ಲಿ ಮಹಿಳಾ ಸಮಾಜ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಹಾಯವಾಣಿ ತೆರೆಯಲಾಗಿದೆ.

ಸಿಇಟಿ ಟಾಪ್ 10 ರ್ಯಾಂಕ್ಸ್ ವಿವರ ಹೀಗಿದೆ
ಇಂಜಿನಿಯರಿಂಗ್:
ಜೆಫಿನ್ ಬಿಜು, ಆರ್.ಚಿನ್ಮಯ್, ಸಾಯಿ ಸಾಕೇತಿಕ ಚೆಕುರಿ, ನಕುಲ ನೀರಜೆ, ಸಮಥ್ ಮಯ್ಯ, ವೈಷ್ಣವ್ ವಿ.ರಾವ್, ಸಿ.ಎಸ್.ಸಾಯಿವಿಷ್ಣು, ನೀರಜ್ ಕೆ.ಉಡುಪ, ಕೆವಿನ್ ಮಾರ್ಟಿನ್, ಅನಿರುದ್ಧ ಫುಕಾನ್.

ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ
ಪಿ.ಮಹೇಶ್ ಆನಂದ್, ವಿ.ವಾಸುದೇವ, ಉದಿತ್ ಮೋಹನ್, ಸುನೀಲ್ ಎಸ್.ಪಾಟೀಲ್, ವರುಣ ರಾಘವೇಂದ್ರ ಐತಾಳ್, ಭುವನ್.ವಿ.ಬಿ, ಹಾಸ್ಯಜೈನ್.ಸಿ.ಎ, ಮಧುಳೀಕ ಎಸ್.ಜಯದೇವ್, ಅವಿನಾಶ್ ಹರೀಶ್, ವಿದ್ಯಾಸಾಗರ್.

ಬಿ.ಎಸ್ಸಿ-ಕೃಷಿ:
ಕೀರ್ತನಾ ಎಂ.ಅರುಣ, ಭುವನ್.ವಿ.ಬಿ., ಶ್ರೀಕಾಂತ್ ಎಂ.ಎಲ್, ಆರ್.ಶರಶ್ಚಂದ್ರ, ಶ್ರೀಧರ್.ಎನ್, ರೋಹಿತ್‍ರಾಜ್, ಸುದೇಶ್ ಗೌಡ.ಜೆ, ಜಿ.ತೀರ್ಥಪ್ರಸಾದ್, ಯಶ್ ಬನ್ನೂರು, ಎಸ್.ದರ್ಶನ್‍ಸಮರ್ಥ.

ಬಿವಿಎಸ್ಸಿ -ಪಶುವೈದ್ಯಕೀಯ ವಿಜ್ಞಾನ
ಪಿ.ಮಹೇಶ್ ಆನಂದ್, ಉದಿತ್ ಮೋಹನ್, ಬಿ.ವಿ.ಎಸ್.ಎನ್.ಸಾಯಿರಾಮ್, ವಿ.ವಾಸುದೇವ್, ಲಿಖಿತಾ.ಎಸ್, ಮಧುಲಿಕ ಎಸ್.ಜಯದೇವ್, ಸುನೀಲ್ ಎಸ್.ಪಾಟೀಲ್, ವರುಣ ರಾಘವೇಂದ್ರ ಐತಾಳ್, ಅವಿನಾಶ್ ಹರೀಶ್, ವಿದ್ಯಾಸಾಗರ್.

ಫಾರ್ಮಸಿ
ಸಾಯಿ ಸಾಕೇತಿಕಾ ಚಕೂರಿ, ಜೆಫಿನ್ ಬಿಜು, ಆರ್.ಚಿನ್ಮಯ್, ನಕುಲ ನೀರಜೆ, ಪಿ.ಮಹೇಶ್ ಆನಂದ್, ಉದಿತ್ ಮೋಹನ್, ವಿ.ವಾಸುದೇವ, ಬಿ.ವಿ.ಎಸ್.ಎನ್.ಸಾಯಿರಾಮ್, ಕೆವಿನ್ ಮಾರ್ಟಿನ್, ಸಿ.ಎಸ್.ಸಾಯಿವಿಷ್ಣು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ