ದೀಪಾವಳಿ ಗಿಫ್ಟ್ ನೀಡಿದ ನಮೋ: ಕೇವಲ 59 ನಿಮಿಷಗಳಲ್ಲಿ 1 ಕೋಟಿವರೆಗೂ ಸಾಲ ಸೌಲಭ್ಯ

ಹೊಸದಿಲ್ಲಿ: ದೀಪಾವಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.

ಹೌದು, ಈ ವರ್ಗದ ಉದ್ಯಮಿಗಳಿಗೆ ಕೇವಲ 59 ನಿಮಿಷಗಳಲ್ಲಿ ಒಂದು ಕೋಟಿ ರೂಪಾಯಿವರೆಗೆ ಸಾಲ ಮಂಜೂರು ಯೋಜನೆಯನ್ನು ಪ್ರಧಾನಿಯವರು ಶುಕ್ರವಾರ ಪ್ರಕಟಿಸಿದ್ದಾರೆ.

ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮತನಾಡಿದ ಪ್ರಧಾನಿ, ಈ ವಲಯದ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ 12 ನೀತಿಗಳನ್ನು ಕೇಂದ್ರ ಸರಕಾರ ಅಂತಿಮಗೊಳಿಸಿದೆ. ನಿಜಕ್ಕೂ ಇದು ಬೆಳಕಿನ ಹಬ್ಬ ದೀಪಾವಳಿಯ ಉಡುಗೊರೆಯಾಗಿದೆ ಎಂದು ತಿಳಿಸಿದ್ದಾರೆ.

ಈ ಮಹತ್ವದ ಯೋಜನೆ ಸಣ್ಣ ಹಾಗೂ ಮಧ್ಯಮ ವರ್ಗದ ಉದ್ಯಮಿಗಳಿಗೆ ವರದಾನವಾಗಲಿದ್ದು, ಈ ವಲಯದ ಅಭಿವೃದ್ಧಿ ದೃಷ್ಟಿಯಿಂದ 12 ಐತಿಹಾಸಿಕ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ ಕೇವಲ 59 ನಿಮಿಷಗಳಲ್ಲಿ ಸಾಲ ಸೌಲಭ್ಯ ದೊರೆಯಲಿರುವುದು ಪ್ರಮುಖವಾಗಿದೆ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.

ಈ ವಲಯದಲ್ಲಿ ಜಿಎಸ್‌ಟಿ ನೋಂದಾಯಿತ ಕೈಗಾರಿಕೆಗಳಿಗೆ ಶೇ.2ರಷ್ಟು ರಿಯಾಯಿತಿ ನೀಡುವುದಾಗಿಯೂ ತಿಳಿಸಿದ್ದಾರೆ.

ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಕ್ಷೇತ್ರ ವಿಶಾಲವಾಗಿದೆ. ದೇಶದಲ್ಲಿ 6.3 ಕೋಟಿಗಿಂತ ಅಧಿಕ MSME ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 11.1 ಕೋಟಿಗೂ ಅಧಿಕ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಈ ವಲಯ ದೇಶದ ಜಿಡಿಪಿಗೆ ಶೇ.30ರಷ್ಟು ಕೊಡುಗೆ ನೀಡುತ್ತಿದೆ. ಉತ್ಪಾದನಾ ವಲಯದಲ್ಲಿ ಶೇ.45ರಷ್ಟು ಪಾತ್ರವಹಿಸಿಸಿದ್ದು, ಶೇ.40ರಷ್ಟು ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ