ರಾಹುಲ್ ಗಾಂಧಿ ರಾಜೀನಾಮೆಯನ್ನು ಸರ್ವಾನುಮತದಿಂದ ತಿರಸ್ಕರಿಸಿದ ಕಾಂಗ್ರೆಸ್ ಕಾರ್ಯಕಾರಿಣಿ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಿನಾಯವಾಗಿ ಸೋಲನ್ನಪ್ಪಿರುವ ಹಿನ್ನಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಕಾಂಗ್ರೆಸ್​ ಕಾರ್ಯಕಾರಿಣಿ ರಾಹುಲ್ ರಾಜಿನಾಮೆಯನ್ನು ಸರ್ವಾನುಮತದಿಂದ ತಿರಸ್ಕರಿಸಿದೆ.

ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ, ಈ ಕುರಿತು ಮಾಹಿತಿ ನೀಡಿದ್ದು, ರಾಹುಲ್ ರಾಜೀನಾಮೆ ಪ್ರಸ್ತಾಪವನ್ನು ಕಾಂಗ್ರೆಸ್ ಸರ್ವಾನುಮತದಿಂದ ತಿರಸ್ಕರಿಸಿದೆ. ಹಾಗಾಗಿ ಕಾಂಗ್ರೆಸ್​ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಮುಂದುವರಿಯಲಿದ್ದಾರೆ ಎಂದರು.

ಕಾಂಗ್ರೆಸ್​ ಕಾರ್ಯಕಾರಿಣಿ ಸಭೆಯಲ್ಲಿ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರು. ಅಲ್ಲದೇ ಕುಟುಂಬದವರಿಗೆ ಅಧ್ಯಕ್ಷ ಸ್ಥಾನ ಬೇಡ. ಇನ್ನು ಪ್ರಿಯಾಂಕಾ ಗಾಂಧಿ ಹೆಸರನ್ನೂ ಈ ಸ್ಥಾನಕ್ಕೆ ಸೂಚಿಸಬಾರದು. ಬೇರೆ ಕಾಂಗ್ರೆಸ್ ಹಿರಿಯ ನಾಯಕರ ಹೆಸರನ್ನು ಪ್ರಸ್ತಾಪಿಸುವಂತೆ ಸೂಚಿಸಿದರು. ಆದರೆ ರಾಹುಲ್ ನಿರ್ಧಾರವನ್ನು ಕಾಂಗ್ರೆಸ್ ನಾಯಕರು ಒಪ್ಪಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ರಾಹುಲ್ ಮಾರ್ಗದರ್ಶನದ ಅಗತ್ಯವಿದೆ. ಅಲ್ಲದೇ ಪಕ್ಷ ಸಂಘಟನೆ ಹಾಗೂ ಪಕ್ಷವನ್ನು ಮುನ್ನಡೆಸಲು ರಾಹುಲ್ ಗಾಂಧಿಯೇ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂಬ ಒಕ್ಕೋರಲ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಮನವಲಿಸಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಮುಮ್ದುವರೆಯುವಂತೆ ಒಪ್ಪಿಸಲಾಗಿದೆ.

ಕಾಂಗ್ರೆಸ್​ ಕಾರ್ಯಕಾರಿಣಿ ರಾಹುಲ್​ ಗಾಂಧಿಗೆ ಪಕ್ಷವನ್ನು ಪುನರ್​ರಚಿಸಲು ಸಂಪೂರ್ಣ ಅಧಿಕಾರ ನೀಡಿದೆ. ಪಕ್ಷ ಪುನರ್​ ಸಂಘಟನೆ ಕುರಿತು ಶೀಘ್ರದಲ್ಲೇ ಯೋಜನೆಯನ್ನು ಪ್ರಕಟಿಸುತ್ತೇವೆ ಎಂದು ಸುರ್ಜೇವಾಲಾ ತಿಳಿಸಿದರು.

ನಂತರ ಮಾತನಾಡಿದ ಮಾಜಿ ಸಚಿವ ಎ.ಕೆ. ಆಂಟನಿ ಈ ಚುನಾವಣೆಯಲ್ಲಿ ಕಾಂಗ್ರೆಸ್​ ಕಳಪೆ ಪ್ರದರ್ಶನ ನೀಡಿದೆ ಎಂದಲ್ಲ. ನಾವು ನಮ್ಮ ನಿರೀಕ್ಷೆಯಷ್ಟು ಸ್ಥಾನಗಳನ್ನು ಗೆಲ್ಲಲಾಗಲಿಲ್ಲ. ಸೋಲಿನ ಕುರಿತು ಪಕ್ಷ ವಿವರವಾದ ಚರ್ಚೆ ನಡೆಸಲಿದೆ. ಇಂದು ಚುನಾವಣೆ ಸೋಲಿನ ಕುರಿತು ಸಣ್ಣ ಪ್ರಮಾಣದ ಚರ್ಚೆ ಮಾತ್ರ ನಡೆದಿದೆ ಎಂದು ತಿಳಿಸಿದರು.

ಸಭೆಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನ ಮಂತ್ರಿ ಮನಮೋಹನ್​ ಸಿಂಗ್​, ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಮಾಜಿ ಸಚಿವ ಪಿ.ಚಿದಂಬರಂ, ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಪ್ರಮುಖ ಹಿರಿಯ ನಾಯಕರು ಪಾಲ್ಗೊಂಡಿದ್ದರು.

Rahul Gandhi’s Resignation Rejected at CWC

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ