ಬೆಂಗಳೂರು, ಜು.24- ಕೊರೊನಾ ವೈರಸ್ಗಿಂತ ಮಾರಕವಾಗಿರುವ ಝೀಕಾ ವೈರಾಣು ಬಗ್ಗೆ ಎಚ್ಚರ ವಹಿಸದಿದ್ದರೆ ಗರ್ಭಿಣಿಯರ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರುವುದಲ್ಲದೆ ಮಕ್ಕಳ ಬೆಳವಣಿಗೆಯೂ ಕುಂಠಿತವಾಗುವ ಅಪಾಯ ಎದುರಾಗಿದೆ.
ಈಗಾಗಲೇ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಝೀಕಾ ವೈರಸ್ ಹಾವಳಿ ಹೆಚ್ಚಾಗುತ್ತಿದ್ದು, ನಗರದಲ್ಲೂ ಝೀಕಾ ವೈರಸ್ ಕಾಟ ಆರಂಭವಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸುವ ಅಗತ್ಯವಿದೆ.
ಡೆಂಘೀ, ಮಲೇರಿಯಾ ಸೋಂಕಿನಂತೆ ಹಗಲು ವೇಳೆ ಕಚ್ಚುವ ಸೊಳ್ಳೆಯಿಂದ ಝೀಕಾ ವೈರಾಣುಗಳು ಉತ್ಪತ್ತಿಯಾಗುತ್ತವೆ. ಹೀಗಾಗಿ ಗರ್ಭಿಣಿಯರು ಹಾಗೂ ಮಕ್ಕಳು ಭಾರೀ ಎಚ್ಚರಿಕೆ ವಹಿಸಬೇಕು.
ಕೊರೊನಾ ಲಸಿಕೆ ಪಡೆದವರ ಮೇಲೆ ಝೀಕಾ ವೈರಸ್ ಅಷ್ಟು ಪರಿಣಾಮ ಬೀರುವುದಿಲ್ಲ. ಗರ್ಭಿಣಿಯರು ಕೊರೊನಾ ಲಸಿಕೆ ಪಡೆಯಲು ಇನ್ನೂ ಅವಕಾಶ ನೀಡದಿರುವ ಹಿನ್ನೆಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಹೆಚ್ಚಾಗುವ ಝೀಕಾ ವೈರಸ್ಗಳ ಬಗ್ಗೆ ಗಮನ ಹರಿಸಬೇಕಾಗಿದೆ.
ಝೀಕಾ ವೈರಸ್ಗೆ ಇನ್ನೂ ಮದ್ದು ಕಂಡುಹಿಡಿದಿಲ್ಲ. ಝೀಕಾ ವೈರಸ್ಗಳಿಗೆ ಗರ್ಭಿಣಿಯರು ತುತ್ತಾದರೆ ಮೊದಲು ಸಮಸ್ಯೆಯಾಗುವುದೇ ಹುಟ್ಟುವ ಮಗುವಿಗೆ.
ಗರ್ಭಿಣಿಯರ ದೇಹ ಪ್ರವೇಶಿಸಿದ ಝೀಕಾ ವೈರಾಣುಗಳು ಭ್ರೂಣಗಳ ಮೆದುಳಿಗೆ ಚಲಿಸಿ ಗಂಭೀರ ಪರಿಣಾಮ ಬೀರುವುದರಿಂದ ಹುಟ್ಟುವ ಮಕ್ಕಳಿಗೆ ಆಟಿಸಂನಂತಹ ರೋಗ ಲಕ್ಷಣಗಳು ಕಂಡುಬರುವ ಸಾಧ್ಯತೆ ಇದೆ.
ಇದರ ಜತೆಗೆ ಶ್ರವಣ ಹಾಗೂ ದೃಷ್ಟಿ ದೋಷ, ನರಗಳ ಬೆಳವಣಿಗೆ ಕುಂಠಿತ, ಕೀಲುಗಳಲ್ಲಿ ಚಲನೆ ಇಲ್ಲದಂತಾಗುತ್ತದೆ. ಒಂದು ವೇಳೆ ಸೋಂಕಿಗೆ ತುತ್ತಾದ ಗರ್ಭಿಣಿಯರ ರೋಗ-ನಿರೋಧಕ ಶಕ್ತಿ ಕಡಿಮೆ ಇದ್ದರೆ ಮಗುವಿನ ಪ್ರಾಣಕ್ಕೆ ಅಪಾಯ ಎದುರಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ರಾಜ್ಯದೆಲ್ಲೆಡೆ ಭಾರೀ ಮಳೆಯಾಗುತ್ತಿರುವುದರಿಂದ ನಿಂತ ನೀರಿನಲ್ಲಿ ಝೀಕಾ ವೈರಾಣುಗಳು ಉತ್ಪತ್ತಿಯಾಗುವುದರಿಂದ ಗರ್ಭಿಣಿಯರು ಇಂತಹ ಸಮಯದಲ್ಲಿ ಭಾರೀ ಎಚ್ಚರಿಕೆ ವಹಿಸಬೇಕು. ಇದರ ಜತೆಗೆ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸೊಳ್ಳೆ ನಿವಾರಕ ಕ್ರೀಮ್ಗಳನ್ನು ಬಳಕೆ ಮಾಡಿಕೊಳ್ಳುವುದು, ಮೈ ತುಂಬಾ ಬಟ್ಟೆ ಧರಿಸುವುದು, ಮಧ್ಯಾಹ್ನದ ವೇಳೆ ನಿದ್ರಿಸುವಾಗ ಸೊಳ್ಳೆ ಪರದೆ ಬಳಸುವುದು ಸೂಕ್ತ ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.
ಸರ್ಕಾರ ವಿಪರೀತ ಸೊಳ್ಳೆಗಳಿರುವ ಪ್ರದೇಶಗಳು, ಪಾರ್ಕ್ಗಳು ಮತ್ತಿತರ ಜಾಗಗಳಲ್ಲಿ ಸೊಳ್ಳೆ ನಿವಾರಕ ಔಷಧಿ ಸಿಂಪಡಣೆ ಮಾಡಬೇಕು. ಗರ್ಭಿಣಿಯರಿಗೆ ಝೀಕಾ ವೈರಸ್ನಿಂದ ಕಾಪಾಡಿಕೊಳ್ಳುವಂತೆ ಆರೋಗ್ಯ ಕಾರ್ಯಕರ್ತರು ಸಲಹೆ ನೀಡುವ ಅನಿವಾರ್ಯತೆ ಎದುರಾಗಿದೆ.