ಮೊದಲ ತ್ರೈಮಾಸಿಕದಿಂದ ಚೇತರಿಸಿಕೊಂಡ ದೇಶದ ಆರ್ಥಿಕತೆ 2021ರಲ್ಲಿ ಚೀನಾ ಜಿಡಿಪಿ ಮೀರಿಸಲಿದೆ ಭಾರತ !

ವಾಷಿಂಗ್ಟನ್: ಕೋವಿಡ್ ಬಿಕ್ಕಟ್ಟಿನಿಂದ ಜಗತ್ತಿನ ಇತರ ದೇಶಗಳಂತೆಯೇ ಭಾರತದ ಆರ್ಥಿಕತೆಗೂ ಹಿಂಜರಿತ ಉಂಟಾಗಿದ್ದು, ಈ ವರ್ಷ ಜಿಡಿಪಿ ಮೈನಸ್ ಶೇ.10.5ಕ್ಕೆ ಕುಸಿಯಲಿದೆ .ಆದರೆ 2021ರಲ್ಲಿ ಭಾರತದ ಆರ್ಥಿಕತೆ ಪುಟಿದೆದ್ದು ಚೀನಾ ಜಿಡಿಪಿಯನ್ನೂ ಮೀರಿಸಿ ವಿಶ್ವದಲ್ಲೇ ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಹಿರಿಮೆಗೆ ಪಾತ್ರವಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿ(ಐಎಂಎಫ್)ತಿಳಿಸಿದೆ.
2021ಕ್ಕೆ ಭಾರತದ ಜಿಡಿಪಿ ಪುಟಿದೇಳಲಿದೆ.ಈಗಿನ ನಕಾರಾತ್ಮಕ ಇಳಿಕೆಯು ಸಕಾರಾತ್ಮಕ ಏರಿಕೆಯ ಮಟ್ಟಕ್ಕೆ ಮರಳಲಿದ್ದು, ಜಿಡಿಪಿ ಶೇ.8.8ಕ್ಕೆ ಏರಲಿದೆ. ಅಲ್ಲದೇ,ಅತಿ ವೇಗದ ಬೆಳವಣಿಗೆಯ ಆರ್ಥಿಕತೆಯ ದೇಶ ಎನ್ನುವ ಹೆಗ್ಗಳಿಕೆಯನ್ನು ಭಾರತ ಮತ್ತೆ ಪಡೆಯಲಿದೆ. ಅಷ್ಟೇ ಅಲ್ಲದೆ ಮುಂದಿನ ವರ್ಷದಲ್ಲಿ ಶೇ.8.2ರಷ್ಟಿರುವ ಚೀನಾದ ಜಿಡಿಪಿಯನ್ನೂ ಮೀರಿ ಭಾರತ ಮುಂದೆ ಸಾಗಲಿದೆ ಎಂದದು ಹೇಳಿದೆ.ಈ ವರ್ಷ ಮೈನಸ್ ಶೇ.10.5ರ ಕುಸಿತವನ್ನು ಹಿಂದಿಕ್ಕಿ ಮುಂದಿನ ವರ್ಷ ಭಾರತ ಈ ಸಾಧನೆ ಮಾಡಲಿದೆ ಎಂದಿರುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವಾರ ವಿಶ್ವ ಬ್ಯಾಂಕ್‍ನ ವರದಿ ಬಿಡುಗಡೆಯಾಗಿದ್ದು, ಭಾರತದ ಜಿಡಿಪಿ ಮೈನಸ್ ಶೇ.9.6ಕ್ಕೆ ಕುಸಿಯಲಿದೆ ಎಂದಿತ್ತು.ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಮೈನಸ್ ಶೇ.23.9ರ ಕುಸಿತ ಕಂಡಿದ್ದರೂ, ಇದೀಗ ಚೇತರಿಸಿಕೊಳ್ಳುತ್ತಿದೆ.ಈ ವರ್ಷ ವಿಶ್ವದ ಎಲ್ಲ ಪ್ರಮುಖ ಬೃಹತ್ ಆರ್ಥಿಕತೆಯ ದೇಶಗಳ ಜಿಡಿಪಿ ನಕಾರಾತ್ಮಕ ಬೆಳವಣಿಗೆ ದಾಖಲಿಸಲಿವೆ. ಆದರೆ, ಚೀನಾ ಜಿಡಿಪಿ ಸ್ವಲ್ಪ ಸಕಾರಾತ್ಮಕ ಅಂದರೆ ಶೇ.1.9ರ ಬೆಳವಣಿಗೆ ದಾಖಲಿಸಲಿದೆ ಎಂದದು ಅಂದಾಜಿಸಿದೆ.
`ವಿಶ್ವ ಆರ್ಥಿಕತೆಯ ಮೇಲ್ನೋಟ’ ಎನ್ನುವ ಹೊಸ ವರದಿಯಲ್ಲಿ ವಿಶ್ವದ ವಿವಿಧ ದೇಶಗಳಲ್ಲಿನ ಆರ್ಥಿಕ ಬೆಳವಣಿಗೆ ಬಗ್ಗೆ ಅದು ತನ್ನ ಅಂದಾಜನ್ನು ಪ್ರಕಟಿಸಿದೆ.
ಜಗತ್ತಿನ ಜಿಡಿಪಿ ಕುಸಿತ
ಈ ವರ್ಷ ಜಾಗತಿಕ ಜಿಡಿಪಿ ಮೈನಸ್ ಶೇ.4.4ಕ್ಕೆ ಕುಸಿಯಲಿದೆ. ಇದು ಜಗತ್ತಿನ ಎಲ್ಲ ದೇಶಗಳಲ್ಲಿ ತೀವ್ರ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಲಿದೆ. ಅಮೆರಿಕದ ಜಿಡಿಪಿ ಕೂಡಾ ಮೈನಸ್ ಶೇ.5.8ಕ್ಕೆ ಕುಸಿಯಲಿದೆ.ಮುಂದಿನ 2021ಕ್ಕೆ ಜಿಡಿಪಿ ಶೇ.5.5ಕ್ಕೆ ಏರಿಕೆಯಾಗಲಿದೆ. ಈ ವರ್ಷ ವಿಶ್ವದ 9 ಕೋಟಿ ಬಡವರು ತೀರಾ ಸಂಕಷ್ಟಕ್ಕೆ ಸಿಲುಕಿ ಕಡು ಬಡವರಾಗಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ