ಬೆಂಗಳೂರು,ಜು.24-ಹೈಕಮಾಂಡ್ನಿಂದ ನಾಳೆ ಸಂದೇಶ ಬಂದ ನಂತರ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದರೂ ಅವರ ನಡೆ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಈಗಿನ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ದೆಹಲಿ ವರಿಷ್ಠರು ಒಂದಿಷ್ಟು ದಿನಗಳ ಕಾಲ ಕಾದುನೋಡುವ ತಂತ್ರ ಅನುಸರಿಸುವ ಸಂಭವವಿದೆ ಎಂದು ಹೇಳಲಾಗುತ್ತಿದೆ.
ಅಂದರೆ ನಾಳೆಯೇ ಸಿಎಂಗೆ ರಾಜೀನಾಮೆ ನೀಡುವಂತೆ ಸೂಚಿಸುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಹಾಗೂ ಪ್ರವಾಹ ಉಂಟಾಗಿರುವುದರಿಂದ ಇಂತಹ ದುಸ್ಸಾಹಸಕ್ಕೆ ಕೈ ಹಾಕಲಾರರು ಎನ್ನಲಾಗುತ್ತಿದೆ.
ಆದರೆ ಇನ್ನೊಂದು ಮೂಲದ ಪ್ರಕಾರ ಸಿಎಂಗೆ ಬಿಜೆಪಿ ವರಿಷ್ಠರು ನಾಳೆಯೇ ರಾಜೀನಾಮೆ ನೀಡುವಂತೆ ಸೂಚಿಸುವ ಸಾಧ್ಯತೆಯಿದ್ದು, ನಂತರ ಸೋಮವಾರ ಮಧ್ಯಾಹ್ನ 3 ಗಂಟೆಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ತಾವರ್ ಚಂದ್ರ ಗೆಲ್ಹೋಟ್ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಲಿದ್ದಾರೆ ಎಂದು ಖಚಿತಪಡಿಸಿವೆ.
ರಾಜೀನಾಮೆ ನೀಡಲು ಕ್ಷಣಗಣನೆ ಆರಂಭವಾಗಿದ್ದರೂ ಒಂದಿಷ್ಟು ವಿಚಲಿತರಾಗದ ಯಡಿಯೂರಪ್ಪನವರು ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇಂದು ಕೂಡ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಅಧಿಕೃತ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. ಬೆಳ್ಳಂಬೆಳ್ಳಗೆಯೇ ಬೆಳಗಾವಿ ಸೇರಿದಂತೆ ಮತ್ತಿತರ ಜಿಲ್ಲಾಧಿಕಾರಿಗಳ ಜೊತೆ ಪ್ರವಾಹ ಪರಿಸ್ಥಿತಿಯ ಮಾಹಿತಿ ಪಡೆದರು.
ನಂತರ ಕೆಲವು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ದೂರವಾಣಿ ಮೂಲಕ ಚರ್ಚಿಸಿ ಜಿಲ್ಲಾ ಕೇಂದ್ರಗಳಲ್ಲಿ ವಾಸ್ತವ್ಯ ಹೂಡುವಂತೆ ಸೂಚಿಸಿದರು.
ಶಿವಮೊಗ್ಗ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ವರ್ಚುವಲ್ ಮೂಲಕ ನೆರವೇರಿಸಿದರು.
ನಾಳೆ ಬೆಳಗಾವಿಗೆ ತೆರಳಲಿರುವ ಅವರು ಪ್ರವಾಹದಿಂದ ಉಂಟಾಗಿರುವ ಸ್ಥಳಗಳಲ್ಲಿ ವೈಮಾನಿಕ ಸಮೀಕ್ಷೆ ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸಮಗ್ರ ವರದಿಗಳನ್ನು ಪಡೆಯುವರು.
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ರಾಜ್ಯದಲ್ಲಿ ಪ್ರವಾಹ ಬಂದಿರುವ ಕಾರಣ ನಾಳೆಯೇ ಸಿಎಂಗೆ ರಾಜೀನಾಮೆ ನೀಡಿ ಎಂಬ ಸಂದೇಶ ರವಾನಿಸುವ ಸಾಧ್ಯತೆಗಳು ಇಲ್ಲ ಎನ್ನಲಾಗುತ್ತಿದೆ.
ಇದೇ ಮಾತನ್ನು ಬಿಎಸ್ವೈ ಬಣ ಕೂಡ ಹೇಳುತ್ತಿದ್ದು, ಅಂತಿಮವಾಗಿ ಒಂದೆರಡು ದಿನಗಳಲ್ಲಿ ಸ್ಪಷ್ಟ ಚಿತ್ರಣ ಹೊರಬೀಳಲಿದೆ.