ನಗರ ಜಿಲ್ಲಾಧಿಕಾರಿ ಹುದ್ದೆಗೆ ಕಿರಿಯ ಐಎಎಸ್ ಅಧಿಕಾರಿ ನೇಮಕ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜಾತಿ ಪ್ರೇಮ ಆರೋಪ

ಬೆಂಗಳೂರು, ಮಾ.14- ನಗರ ಜಿಲ್ಲಾಧಿಕಾರಿ ಹುದ್ದೆಗೆ ಕಿರಿಯ ಐಎಎಸ್ ಅಧಿಕಾರಿಯನ್ನು ನೇಮಕ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಪ್ರೇಮ ಮೆರೆದಿದ್ದಾರೆ. ಕೂಡಲೇ ಈ ಆದೇಶವನ್ನು ರದ್ದುಪಡಿಸಬೇಕು ಎಂದು ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

ಕೇವಲ 12 ದಿನಗಳ ಹಿಂದಷ್ಟೆ ಕೆಎಎಸ್‍ನಿಂದ ಐಎಎಸ್ ಶ್ರೇಣಿಗೆ ಬಡ್ತಿ ಪಡೆದಿರುವ ಕೆ.ಎ.ದಯಾನಂದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಬಂಧಿಕರಾಗಿದ್ದಾರೆ.

ಈ ಒಂದೇ ಕಾರಣಕ್ಕಾಗಿ ನಿಯಮ ಮೀರಿ ಬೆಂಗಳೂರು ನಗರ ಜಿಲ್ಲಾಧಿಕಾರಿಯಂತಹ ಅತ್ಯುನ್ನತ ಹುದ್ದೆ ನೀಡಲಾಗಿದೆ. ಕೂಡಲೇ ಈ ಆದೇಶ ರದ್ದುಪಡಿಸಬೇಕು ಎಂದು ಬಿಜೆಪಿ ವಕ್ತಾರ ಹಾಗೂ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಹುದ್ದೆಗೆ ಕನಿಷ್ಟ ನಾಲ್ಕೈದು ವರ್ಷಗಳ ಸೇವಾ ಹಿರಿತನ ಹೊಂದಿರುವ ಹಿರಿಯ ಅಧಿಕಾರಿಗಳನ್ನೇ ನಿಯೋಜಿಸಬೇಕು. ಈ ನಿಯಮದ ಅರಿವಿದ್ದರೂ ಮುಖ್ಯಮಂತ್ರಿಗಳು ಕಾನೂನು ಮೀರಿ ಕಿರಿಯ ಅಧಿಕಾರಿ ದಯಾನಂದ್ ಅವರನ್ನು ಡಿಸಿ ಹುದ್ದೆಗೆ ನಿಯೋಜಿಸಿದ್ದಾರೆ.

ಕಳೆದ ನಾಲ್ಕೂವರೆ ವರ್ಷಗಳಿಂದ ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ಶಂಕರ್ ಅವರು ಕೂಡ ಮುಖ್ಯಮಂತ್ರಿಗಳ ಹತ್ತಿರದ ಸಂಬಂಧಿಕರೇ. ಇದೀಗ ಅವರನ್ನು ಬೇರೆಡೆ ವರ್ಗ ಮಾಡಿ ಆ ಸ್ಥಾನಕ್ಕೆ ತಮ್ಮ ಕುಲಬಾಂಧವ ಕಿರಿಯ ಅಧಿಕಾರಿಯನ್ನು ನೇಮಕ ಮಾಡಿರುವುದು ಎಷ್ಟು ಸರಿ ಎಂದು ರಮೇಶ್ ಪ್ರಶ್ನಿಸಿದ್ದಾರೆ.

ನಗರ ಮತ್ತು ನಗರ ಜಿಲ್ಲೆಗೆ ಒಳಪಡುವ 28 ವಿಧಾನಸಭಾ ಕ್ಷೇತ್ರಗಳ ಮೇಲೆ ಚುನಾವಣೆ ಸಂದರ್ಭದಲ್ಲಿ ಹಿಡಿತ ಸಾಧಿಸಬೇಕು ಎಂಬ ಏಕೈಕ ಉದ್ದೇಶದಿಂದಲೇ ಸಿಎಂ ಸಿದ್ದರಾಮಯ್ಯ ಅವರು ಈ ರೀತಿಯ ಕಾನೂನು ಬಾಹಿರ ನಿರ್ಣಯ ಕೈಗೊಂಡಿದ್ದಾರೆ.

ಹೀಗಾಗಿ ಚುನಾವಣಾ ಆಯೋಗ ದಯಾನಂದ್ ಅವರ ನೇಮಕಕ್ಕೆ ತಡೆ ನೀಡಿ ಅವರನ್ನು ಬೇರೆಡೆ ವರ್ಗಾಯಿಸಬೇಕು ಎಂದು ಸರ್ಕಾರಕ್ಕೆ ಆದೇಶ ನೀಡುವಂತೆ ರಮೇಶ್ ದೂರಿನಲ್ಲಿ ಆಗ್ರಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ