ನಿಗದಿಗೂ ಮೊದಲೇ ಗರ್ಭಗೃಹದಲ್ಲಿ ರಾಮಲಲ್ಲಾ ದರ್ಶನ 2023ಕ್ಕೆ ರಾಮಮಂದಿರ ಪೂರ್ಣ

ಅಯೋಧ್ಯೆ: ಕಳೆದೈದು ಶತಮಾನಗಳಿಂದಲೂ ರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರಕ್ಕಾಗಿ ಕಾಯುತ್ತಿರುವ ರಾಮ ಭಕ್ತರಿಗೆ ಸಿಹಿ ಸುದ್ದಿ. ನಿಗದಿತ ಅವಗೂ ಒಂದು ವರ್ಷ ಮೊದಲೇ ಮಂದಿರದ ಗರ್ಭಗೃಹದಲ್ಲಿ ರಾಮಲಲ್ಲಾ ಭಕ್ತರಿಗೆ ದರ್ಶನ ನೀಡಲಿದ್ದಾನೆ.

ಮಂದಿರ ನಿರ್ಮಿಸುತ್ತಿರುವ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರ ನೇತೃತ್ವದಲ್ಲಿ ನಡೆದ ಎರಡು ದಿನಗಳ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ. 2023ರ ಅಂತ್ಯದೊಳಗೆ ಮಂದಿರವನ್ನು ಪೂರ್ಣಗೊಳಿಸಿ, ಪೂಜೆ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಮಂದಿರದಲ್ಲಿ ಇರಲಿದೆ ಲಿಫ್ಟ್
ಈ ಮೊದಲು 2024ರ ವೇಳೆಗೆ ರಾಮ ಮಂದಿರವನ್ನು ನಿರ್ಮಿಸುವ ಗುರಿ ಇತ್ತು. ಆದರೆ ಈಗ ಅದನ್ನು 2023ಕ್ಕೆ ಇಳಿಸಲಾಗಿದೆ. ಹಾಗಾಗಿ 2023ರಿಂದ ಭಕ್ತರು ಮಂದಿರದ ಗರ್ಭಗೃಹದಲ್ಲಿ ಪೂಜೆ ಸಲ್ಲಿಸಲು ಸಾಧ್ಯವಾಗುತ್ತದೆ. ಮಂದಿರಕ್ಕೆ ಭೇಟಿ ನೀಡುವ ವೃದ್ಧರು ಮತ್ತು ಅಂಗವಿಕಲರಿಗಾಗಿ ಎರಡು ಲಿಫ್ಟ್‍ಗಳನ್ನು ಸಹ ಅಳವಡಿಸಲಾಗುವುದು. ಇಲ್ಲಿ ತ್ರೇತಾಯುಗದ ಸುಂದರ ನೋಟಗಳೊಂದಿಗೆ ಭಕ್ತರಿಗೆ ಆಧುನಿಕ ಸೌಕರ್ಯಗಳ ಕುರಿತು ಸಂಪೂರ್ಣ ಗಮನ ಹರಿಸಲಾಗುವುದು. 2025ರ ಅಂತ್ಯದೊಳಗೆ ಇಡೀ ಕ್ಯಾಂಪಸ್ ಅನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗುತ್ತದೆ.

ಸಂಕೀರ್ಣದಲ್ಲಿ ನೈಸರ್ಗಿಕ ವಾತಾವರಣ
ರಾಮ ಮಂದಿರ ಸೇರಿದಂತೆ 70ಎಕರೆ ವಿಸ್ತೀರ್ಣದ ಕ್ಯಾಂಪಸ್ ಪರಿಸರ ಸ್ನೇಹಿಯಾಗಿರುತ್ತದೆ. ಕ್ಯಾಂಪಸ್ ಒಳಗಿನ ತ್ಯಾಜ್ಯ ನೀರು ಹರಿದು ರಾಮ ನಗರಿಯ ಉಳಿದ ಭಾಗಗಳಿಗೆ ತೊಂದರೆಯಾಗದಂತೆ, ಒಳಚರಂಡಿ ಮತ್ತು ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುವುದು. ಕ್ಯಾಂಪಸ್‍ನಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಸಹ ರಕ್ಷಿಸಲಾಗುವುದು, ಇದರಿಂದಾಗಿ ಆಮ್ಲಜನಕದ ಮಟ್ಟ ಮತ್ತು ತಾಪಮಾನವನ್ನು ಸರಿಯಾಗಿ ನಿರ್ವಹಿಸಲಾಗುತ್ತದೆ ಎಂದು ರಾಯ್ ತಿಳಿಸಿದ್ದಾರೆ.

ಸೆ.15ರೊಳಗೆ ಮೊದಲ ಹಂತ ಪೂರ್ಣ
ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮಂದಿರದ ಭವ್ಯತೆ ಮತ್ತು ಅದರ ಸುರಕ್ಷತೆಯ ಬಗ್ಗೆ ತಾಂತ್ರಿಕ ತಜ್ಞರೊಂದಿಗೆ ಗಹನವಾದ ಚಿಂತನೆ ನಡೆಸಿದ್ದಾರೆ. ಜನ್ಮಭೂಮಿಯಲ್ಲಿ ಬುನಾದಿಗಾಗಿ ತೋಡಿರುವ ಗುಂಡಿಯನ್ನು ತುಂಬಿಸುವ ಕೆಲಸ ಸೆಪ್ಟೆಂಬರ್ 15ರೊಳಗೆ ಪೂರ್ಣಗೊಳಿಸುವ ಗುರಿ ಇದೆ.

ನಿರ್ಮಾಣ ಸಂಸ್ಥೆ ಎಲ್‍ಆ್ಯಂಡ್‍ಟಿ, ಈ ಉದ್ದೇಶಕ್ಕಾಗಿ ಮೂರು ಮಿಶ್ರಣ ಘಟಕಗಳು, 15 ಡಂಪರ್‍ಗಳು, ನಾಲ್ಕು ವೈಬ್ರೊ ರೋಲರ್‍ಗಳನ್ನು ನಿಯೋಜಿಸಿದೆ. ನವೆಂಬರ್‍ನಲ್ಲಿ ದೀಪಾವಳಿಯ ವೇಳೆ ಎರಡನೇ ಹಂತದ ಕೆಲಸ ಶುರುವಾಗಲಿದೆ ಎಂದು ಚಂಪತ್ ರಾಯ್ ವಿವರಿಸಿದ್ದಾರೆ.

ಇಂಜಿನಿಯರಿಂಗ್ ಕ್ಷೇತ್ರದ ಸಣ್ಣ ಸಣ್ಣ ಅಂಶಗಳನ್ನು ವಿವರವಾಗಿ ಚರ್ಚಿಸಲಾಗಿದೆ, ಆರು ತಿಂಗಳ ನಂತರ ಏನು ಮಾಡಬೇಕೆಂಬುದನ್ನು ಇಂದಿನಿಂದ ಚರ್ಚಿಸುತ್ತೇವೆ. ಸಮಯದ ಚೌಕಟ್ಟನ್ನು ಸಿದ್ಧಪಡಿಸಲಾಗಿದೆ, ಯಾವ ಕೆಲಸವನ್ನು ಮಾಡಲಾಗುತ್ತದೆ, ಅಗತ್ಯವಾದ ವಸ್ತು ಎಲ್ಲಿಂದ ಬರುತ್ತದೆ ಮತ್ತು ಎಷ್ಟು ಸಮಯ ಅದನ್ನು ಆವರಣದಲ್ಲಿ ಇಡಲಾಗುತ್ತದೆ. ಇದೆಲ್ಲವೂ ಚರ್ಚಿಸುತ್ತೇವೆ. ಭವಿಷ್ಯದಲ್ಲಿ ಇಂತಹ ಅನೇಕ ಸಣ್ಣಪುಟ್ಟ ವಿಷಯಗಳು ಅಡ್ಡಿಯಾಗುತ್ತವೆ. ಈ ನಿಟ್ಟಿನಲ್ಲಿ ಇಂಜಿನಿಯರ್‍ಗಳು, ವಾಸ್ತುಶಿಲ್ಪಿಗಳೊಂದಿಗೆ ನಿಯಮಿತವಾಗಿ ಮಂದಿರ ನಿರ್ಮಾಣ ಸಮಿತಿ ಸಭೆ ನಡೆಸುತ್ತದೆ ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ