ಭಯೋತ್ಪಾದಕರ ಬಂಧನ ಬಳಿಕ ರಕ್ಷಣೆಗೆ ಹೆಚ್ಚಿನ ನಿಗಾ ರಾಮಜನ್ಮಭೂಮಿ ಸಂಕೀರ್ಣ ಭದ್ರತೆಗಾಗಿ ಹೊಸ ನೀಲನಕ್ಷೆ

ಅಯೋಧ್ಯೆ: ಇತ್ತೀಚೆಗೆ ಲಖನೌದಲ್ಲಿ ಇಬ್ಬರು ಭಯೋತ್ಪಾದಕರ ಬಂಧನದ ಬಳಿಕ ರಾಮ ಜನ್ಮಭೂಮಿಯಲ್ಲಿ ಭದ್ರತೆಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ಜನ್ಮಭೂಮಿ ಸಂಕೀರ್ಣದ ಭದ್ರತೆಗಾಗಿ ಹೊಸ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಮಂದಿರ ನಿರ್ಮಾಣ ಕಾರ್ಯ ಹಾಗೂ ರಾಮಲಲ್ಲಾ ದರ್ಶನ ನಿರಂತರ ಮುಂದುವರಿಯಲಿದೆ.

ಈಗಾಗಲೇ ರಾಮ ಜನ್ಮಭೂಮಿ ಸಂಕೀರ್ಣ, ರಾಮ್‍ಕೋಟ್ ಪರಿಸರದಲ್ಲಿ ಸಿಸಿಟಿವಿ ಕ್ಯಾಮೆರಾಗಳು, ವಾಚ್‍ಟವರ್‍ಗಳು ಮತ್ತು ಸಿಆರ್‍ಪಿಎಫ್, ಪಿಎಸಿ ಮತ್ತು ಪೊಲೀಸ್ ಪಡೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೇ ಜನ್ಮಭೂಮಿ ಸಂಕೀರ್ಣ ಪ್ರವೇಶಿಸಲು, ಅನೇಕ ಚೆಕ್‍ಪಾಯಿಂಟ್‍ಗಳನ್ನೂ ಸ್ಥಾಪಿಸಲಾಗಿದೆ.

ಆದಾಗ್ಯೂ ಕೆಲವು ಮಾರ್ಗಗಳು ಚೆಕ್‍ಪಾಯಿಂಟ್‍ಗಳನ್ನು ಹಾದುಹೋಗುವುದಿಲ್ಲ. ಆದ್ದರಿಂದ ಸಂಕೀರ್ಣ ತಲುಪುವ ಎಲ್ಲ ಮಾರ್ಗಗಳಲ್ಲಿಯೂ ಚೆಕ್‍ಪಾಯಿಂಟ್ ಸ್ಥಾಪಿಸಲಾಗುತ್ತಿದೆ.

ಎಡಿಜಿ (ಸೆಕ್ಯುರಿಟಿ) ವಿ.ಕೆ. ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ರಾಮ ಜನ್ಮಭೂಮಿ ಭದ್ರತಾ ಸ್ಥಾಯಿ ಸಮಿತಿ ಸಭೆಯಲ್ಲಿ ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ಶಿಥಿಲಗೊಂಡಿರುವ ವಾಚ್‍ಟವರ್ ಮತ್ತು ಹಾನಿಗೊಳಗಾದ ಸಿಸಿಟಿವಿ ಕ್ಯಾಮೆರಾಗಳನ್ನು ಸರಿಪಡಿಸಲು ಸೂಚನೆ ನೀಡಲಾಗಿದೆ.

ಸರಕು ವಾಹನಗಳ ಪ್ರವೇಶಕ್ಕೆ ಹೊಸ ಮಾರ್ಗ
ಮಂದಿರ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸಲು ಆಗಾಗ್ಗೆ ಸರಕು ಸಾಗಣೆ ವಾಹನಗಳು ಬರುತ್ತಿರುವುದರಿಂದ ಕೆಲವೆಡೆ ಟ್ರಾಫಿಕ್ ಜಾಮ್ ಆಗುತ್ತಿದೆ. ಇದು ಸುರಕ್ಷತೆಗೆ ಧಕ್ಕೆ ತರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಮಂದಿರದ ನಿರ್ಮಾಣಕ್ಕಾಗಿ ಸರಕು ವಾಹನಗಳ ಪ್ರವೇಶಕ್ಕೆ ಹೊಸ ಮಾರ್ಗ ರೂಪಿಸಲು ನಿರ್ಧರಿಸಲಾಗಿದೆ. ಈಗಾಗಲೇ ಹೊಸ ಮಾರ್ಗಕ್ಕಾಗಿ ಸಂಪರ್ಕ ರಸ್ತೆ ನಿರ್ಮಿಸುವ ಕೆಲಸ ನಡೆಯುತ್ತಿದೆ. ಜನ್ಮಭೂಮಿಗೆ ಭೇಟಿ ನೀಡುವ ಪ್ರತಿ ಸಂದರ್ಶಕರ ದಾಖಲೆಯನ್ನು ಪರಿಶೀಲಿಸಲು ಯೋಜಿಸಲಾಗಿದೆ. ಜನ್ಮಭೂಮಿ ಸಂಕೀರ್ಣ ಮಾತ್ರಲ್ಲದೇ ಇಡೀ ಅಯೋಧ್ಯೆಯನ್ನು ಹೈಟೆಕ್ ಮಾಡುವ ಯೋಜನೆ ಇದ್ದು, ರಾಮ್‍ಕೋಟ್ ಪ್ರವೇಶ ಮಾರ್ಗಗಳ ಸುರಕ್ಷತೆ ಇನ್ನಷ್ಟು ಬಲಪಡಿಸಲು ತೀರ್ಮಾನಿಸಲಾಗಿದೆ.

ರಾಮಜನ್ಮಭೂಮಿ ಭದ್ರತೆಯಲ್ಲಿ ರಾಜಿ ಇಲ್ಲ
ಹಿಂದಿನ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಈ ಸಭೆಯಲ್ಲಿ ಪರಿಶೀಲಿಸಲಾಗಿದೆ. ರಾಮ ಜನ್ಮಭೂಮಿಯ ಭದ್ರತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಪ್ರಸ್ತುತ ಮಂದಿರ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಸ್ಥಳ ಪರಿಶೀಲನೆ ನಂತರ, ಭದ್ರತೆಗೆ ಸಂಬಂಸಿದ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ರಾಮ ಜನ್ಮಭೂಮಿಯ ಭದ್ರತೆ ಈಗಾಗಲೇ ಪ್ರಬಲವಾಗಿದೆ. ಸಿಆರ್‍ಪಿಎಫ್, ಪಿಎಸಿ ಮತ್ತು ಜಿಲ್ಲಾ ಪೊಲೀಸರು ಈಗಾಗಲೇ ಬಿಗಿ ಭದ್ರತೆ ಒದಗಿಸುತ್ತಿದ್ದಾರೆ ಎಂದು ಎಡಿಜಿ (ಸೆಕ್ಯುರಿಟಿ) ವಿ.ಕೆ. ಸಿಂಗ್ ತಿಳಿಸಿದ್ದಾರೆ.

ಭದ್ರತಾ ಸ್ಥಾಯಿ ಸಮಿತಿ ಸಭೆಗೂ ಮುನ್ನ ಎಡಿಜಿ ಸೆಕ್ಯುರಿಟಿ ವಿ.ಕೆ.ಸಿಂಗ್, ಇತರ ಭದ್ರತಾ ಸಂಸ್ಥೆಗಳ ಅಕಾರಿಗಳೊಂದಿಗೆ ಜನ್ಮಭೂಮಿ ಸಂಕೀರ್ಣಕ್ಕೆ ಭೇಟಿ ನೀಡಿ ವಿವಿಧ ಭದ್ರತಾ ಅಂಶಗಳನ್ನು ಪರಿಶೀಲಿಸಿ, ಸಂಪೂರ್ಣ ಮಾಹಿತಿ ಪಡೆದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ