ಹೊಸದಿಲ್ಲಿ: ಕೊರೋನಾ ನಿಯಂತ್ರಣಕ್ಕೆ ಸೂಕ್ಷ್ಮ ಕಂಟೇನ್ಮೆಂಟ್ ವಲಯಗಳಿಗೆ ಒತ್ತು ನೀಡುವುದು ಉತ್ತಮ ಉಪಾಯ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ.
ಕೊರೋನಾ ಪರಿಸ್ಥಿತಿ ಪರಿಶೀಲನೆ ಕುರಿತು ಎಂಟು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದ ಮೋದಿ, ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಸೂಕ್ಷ್ಮ ಹಂತದ ಕಂಟೇನ್ಮೆಂಟ್ ವಲಯಗಳನ್ನು ರಚಿಸಲು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದಿದ್ದಾರೆ.
ವೈರಸ್ ತನ್ನಷ್ಟಕ್ಕೆ ತಾನೇ ಬಂದು, ಹೋಗುವುದಿಲ್ಲ. ಬದಲಿಗೆ ನಿಯಮಗಳನ್ನು ಪಾಲಿಸದೆ ಅದನ್ನು ನಾವು ನಮ್ಮೊಂದಿಗೆ ತರುತ್ತೇವೆ. ಗುಂಪು ಸೇರುವಂತಹ ನಿರ್ಲಕ್ಷ್ಯದ ನಡವಳಿಕೆಯಿಂದ ಕೊರೋನಾ ಪ್ರಕರಣಗಳು ಉಲ್ಬಣಿಸುತ್ತವೆ ಎಂದು ತಜ್ಞರು ನಮಗೆ ನಿರಂತರವಾಗಿ ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಹೀಗಾಗಿ ಜನದಟ್ಟಣೆ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. 3ನೇ ಅಲೆ ತಡೆಯಲು ನಾವೆಲ್ಲರೂ ಒಟ್ಟಿಗೆ ದುಡಿಯಬೇಕೆಂದಿದ್ದಾರೆ.
ಗಿರಿಧಾಮಗಳ ಚಿತ್ರ ಕಳವಳಕಾರಿ
ಗಿರಿಧಾಮಗಳು ಮತ್ತು ಮಾರುಕಟ್ಟೆಗಳಲ್ಲಿ ಮಾಸ್ಕ್ ಧರಿಸದ ಮತ್ತು ಸಾಮಾಜಿಕ ಅಂತರವಿಲ್ಲದ ಜನದಟ್ಟಣೆಯ ಇತ್ತೀಚಿನ ಚಿತ್ರಗಳು ಕಳವಳವನ್ನುಂಟು ಮಾಡುತ್ತಿದೆ ಎಂದು ಮೋದಿ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, 3ನೇ ಅಲೆಯನ್ನು ತಡೆಗಟ್ಟಲು ಕೊರೋನಾ ನಿಯಮಗಳ ಪಾಲನೆಯ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.
ಪ್ರವಾಸೋದ್ಯಮ ವ್ಯಾಪಾರ ಎನ್ನುವುದು ನಿಜ. ಕೊರೋನಾದಿಂದಾಗಿ ವ್ಯಾಪಾರದ ಮೇಲೆ ಭಾರಿ ಪರಿಣಾಮ ಬೀರಿದೆ ಎನ್ನುವುದೂ ಅಷ್ಟೇ ಸತ್ಯ. ಆದರೆ, ಗಿರಿಧಾಮಗಳು ಮತ್ತು ಮಾರುಕಟ್ಟೆಗಳಲ್ಲಿ ಮಾಸ್ಕ್ ಧರಿಸದೆ ಜನ ಗುಂಪು ಸೇರುವುದು ಸರಿಯಲ್ಲ ಎಂದಿದ್ದಾರೆ.
ಜು. 16ಕ್ಕೆ ಕರ್ನಾಟಕ ಸೇರಿ 6 ರಾಜ್ಯಗಳ ಸಿಎಂಗಳೊಂದಿಗೆ ಸಭೆ
ಹಲವು ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿರುವಂತಹ ತಮಿಳು ನಾಡು, ಆಂಧ್ರ ಪ್ರದೇಶ, ಕರ್ನಾಟಕ, ಕೇರಳ, ಒಡಿಶಾ ಮತ್ತು ಮಹಾರಾಷ್ಟ್ರಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಜು. 16ರಂದು (ಶುಕ್ರವಾರ ) ಸಭೆ ನಡೆಸಲಿದ್ದಾರೆ.
ಈ ವೇಳೆ ಅವರು, ಕೊರೋನಾ ನಿಯಂತ್ರಣ, ನಿಯಮ ಪಾಲನೆ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.