ರಾಜೀನಾಮೆಗೆ ಹೈಕಮಾಂಡ್ ಸೂಚನೆ ನೀಡಿಲ್ಲ: ಬಿಎಸ್‍ವೈ

ಹೊಸದಿಲ್ಲಿ: ನಾಯಕತ್ವ ಬದಲಾವಣೆ ಎಂಬುದು ಕೇವಲ ವದಂತಿ. ಮುಖ್ಯಮಂತ್ರಿಯಾಗಿ ನಾನೇ ಮುಂದುವರಿಯಲಿದ್ದೇನೆ ಎಂದು ಬಿ. ಎಸ್. ಯಡಿಯೂರಪ್ಪ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ . ರಾಜೀನಾಮೆ ನೀಡಬೇಕೆಂದು ಬಿಜೆಪಿ ದಿಲ್ಲಿ ವರಿಷ್ಠರ್ಯಾರೂ ತಮಗೆ ಸೂಚಿಸಿಲ್ಲ ಎಂದು ಒತ್ತಿ ಹೇಳಿದರು.

ಪಕ್ಷದ ಸಂಘಟನೆಗೆ ಸಂಬಂಸಿದಂತೆ ರಾಷ್ಟ್ರೀಯ ನಾಯಕರ ಜೊತೆ ಮಾತುಕತೆ ನಡೆಸಲಾಗಿದೆ. ಶುಕ್ರವಾರವೂ ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಚರ್ಚಿಸಲಾಯಿತು. ಇದು ಹೊರತುಪಡಿಸಿದರೆ ನಾಯಕತ್ವ ಬದಲಾವಣೆಯ ವಿಷಯಗಳಾವುದೂ ಈ ವೇಳೆ ಚರ್ಚೆಯಾಗಲಿಲ್ಲ. ಮುಂದಿನ ತಿಂಗಳು ಎರಡನೇ ವಾರದಲ್ಲಿ ಪುನಃ ದಿಲ್ಲಿಗೆ ಭೇಟಿ ನೀಡಿ ವರಿಷ್ಠರೊಂದಿಗೆ ಮಾತುಕತೆ ನಡೆಸಲಿದ್ದೇನೆಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಡ್ಡಾ ಜತೆ ಚರ್ಚೆ
ಇದಕ್ಕೂ ಮುನ್ನ ಅವರು ಶನಿವಾರದಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ಖುದ್ದು ಭೇಟಿ ಮಾಡಿ ಮಾತುಕತೆ ನಡೆಸಿದರು. ಇಬ್ಬರು ನಾಯಕರು ಪಕ್ಷದ ಸಂಘಟನೆ ಮತ್ತು ಮುಂದಿನ ಚುನಾವಣೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯನ್ನು ಬಲವರ್ಧನೆಗೊಳಿಸುವ ವಿಚಾರವಾಗಿ ಮಾತುಕತೆ ನಡೆಸಿದರು.

ಮುಂದಿನ ಚುನಾವಣೆಗಳಿಗೆ ಸನ್ನದ್ಧ
2023 ರಲ್ಲಿ ರಾಜ್ಯದ ವಿಧಾನಸಭೆಗೆ ಚುನಾವಣೆ ನಡೆಯಲಿದೆ ಮತ್ತು 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ . ಈ ಎರಡೂ ಚುನಾವಣೆಗಳಲ್ಲಿ ಬಿಜೆಪಿ ಅತ್ಯಕ ಸೀಟುಗಳನ್ನು ಗಳಿಸಲು ಪಕ್ಷದ ನಾಯಕರು ಈಗಿನಿಂದಲೇ ಕೆಲಸ ಮಾಡಬೇಕಿದೆ. ಈ ವಿಷಯದಲ್ಲಿ ಪಕ್ಷದ ವರಿಷ್ಠರು ತಮ್ಮ ಮೇಲೆ ವಿಶ್ವಾಸವನ್ನಿಟ್ಟಿದ್ದಾರೆ ಎಂದು ಯಡಿಯೂರಪ್ಪ ವಿವರಿಸಿದರು.

ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮಿ ಅಕಾರದ ಚುಕ್ಕಾಣಿ ಹಿಡಿಯುವುದು ಖಂಡಿತ.

ಈ ದಿಶೆಯಲ್ಲಿ ಪಕ್ಷವು ಬೇರುಮಟ್ಟದಲ್ಲಿ ಯಾವ ರೀತಿ ಸನ್ನದ್ಧವಾಗಬೇಕೆಂಬುದನ್ನು ನಡ್ಡಾ ಅವರು ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ. ಇವುಗಳನ್ನು ಅನುಷ್ಠಾನಗೊಳಿಸುವ ಕೆಲಸ ಶೀಘ್ರವೇ ಆರಂಭವಾಗಲಿದೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ರಕ್ಷಣಾ ಮಂತ್ರಿ ರಾಜನಾಥಸಿಂಗ್ ಅವರನ್ನು ಖುದ್ದು ಭೇಟಿ ಮಾಡಿ ಮಾತುಕತೆ ನಡೆಸಿದರು. ಶುಕ್ರವಾರವಷ್ಟೆ ಬಿಎಸ್‍ವೈ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಜಾರಿ ಕುರಿತು ಕೂಲಂಕಷ ಚರ್ಚೆ ನಡೆಸಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ರಾಜೀನಾಮೆ ನೀಡಲು ನನಗೆ ಸೂಚಿಸಿಲ್ಲ. ಮುಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅತ್ಯಕ ಸೀಟುಗಳನ್ನು ಗೆಲ್ಲುವ ಕುರಿತು ಚರ್ಚೆಯಾಗಿದೆ.
ಬಿ.ಎಸ್. ಯಡಿಯೂರಪ್ಪ, ಸಿಎಂ

ವದಂತಿಗಳಿಗೆ ಕಿವಿಗೊಡಬೇಡಿ
ನಾಯಕತ್ವಕ್ಕೆ ರಾಜೀನಾಮೆ ಎಂಬ ವದಂತಿಗಳಿಗೆ ಮಾಧ್ಯಮಗಳು ಒತ್ತು ನೀಡುವ ಪ್ರಮೇಯವಿಲ್ಲ . ಮುಂದಿನ ತಿಂಗಳು ಎರಡನೇ ವಾರದಲ್ಲಿ ಮತ್ತೆ ದಿಲ್ಲಿಗೆ ಭೇಟಿ ನೀಡಲಿದ್ದು ಪಕ್ಷದ ಪ್ರಮುಖ ನಾಯಕರ ಜತೆ ಮಾತುಕತೆ ನಡೆಸಲಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.

ಜು.26ಕ್ಕೆ ಶಾಸಕಾಂಗ ಪಕ್ಷದ ಸಭೆ
ಬೆಂಗಳೂರು: ಬಿಜೆಪಿ ಅಕಾರಕ್ಕೆ ಬಂದು ಎರಡು ವರ್ಷ ಪೂರ್ಣಗೊಳ್ಳುವ ಹಿನ್ನೆಲೆ ಜು.26ರಂದು ಶಾಸಕಾಂಗ ಪಕ್ಷದ ಸಭೆ ಕರೆಯಲಾಗುವುದು ಎಂದು ಸಿಎಂ ಯಡಿಯೂರಪ್ಪ ಪ್ರಕಟಿಸಿದರು.

ದಿಲ್ಲಿ ಪ್ರವಾಸ ಮುಗಿಸಿ ಬೆಂಗಳೂರಿಗೆ ಆಗಮಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ 2 ವರ್ಷ ಪೂರ್ಣಗೊಳ್ಳುವುದರಿಂದ ಶಾಸಕರನ್ನು ಕರೆದು ಸಭೆ ನಡೆಸಿ ಪಕ್ಷದ ಬಲವರ್ಧನೆ ಕುರಿತು ಚರ್ಚಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ದಿಲ್ಲಿ ಪ್ರವಾಸ ಯಶಸ್ವಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಅರ್ಧ ಗಂಟೆ ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚಿಸಲಾಯಿತು. ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ , ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೂ ರಾಜ್ಯದ ರಾಜಕೀಯ ಕುರಿತು ಚರ್ಚಿಸಿ ಮಾರ್ಗದರ್ಶನ ಪಡೆದಿರುವೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ