ರಾಜ್ಯದಲ್ಲಿ ತಿಂಗಳಿಗೆ 60 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ : ಡಾ.ಸಿ.ಎನ್.ಅಶ್ವತ್ಥನಾರಾಯಣ

ಬೆಂಗಳೂರು, ಜು.14- ರಾಜ್ಯದಲ್ಲಿ ತಿಂಗಳಿಗೆ 60 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಶೇಷಾದ್ರಿಪುರದ ಮಾರುತಿ ಆಸ್ಪತ್ರೆಯಲ್ಲಿಂದು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮತ್ತು ನೂತನ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪ್ರತಿ ತಿಂಗಳೂ ಹಂಚಿಕೆಯಾಗುವ ವ್ಯಾಕ್ಸಿನ್ ಕೋಟಾದ ಆಧಾರದಂತೆ ರಾಜ್ಯದಲ್ಲಿ ಲಸಿಕೀಕರಣ ನಡೆಯುತ್ತಿದೆ. ಕೇಂದ್ರ ಸರಕಾರದಿಂದ ಮಾಸಿಕ 60 ಲಕ್ಷ ಲಸಿಕೆ ಹಂಚಿಕೆಯಾಗುತ್ತಿದೆ ಎಂದರು.

ಈ ಹಂಚಿಕೆ ಆಧಾರದಲ್ಲಿಯೇ ರಾಜ್ಯ ಸರಕಾರ ತಿಂಗಳಿಗೆ ರಾಜ್ಯಾದ್ಯಂತ 60 ಲಕ್ಷ ಜನರಿಗೆ ಲಸಿಕೆ ನೀಡುತ್ತಿದೆ. ಕಳೆದ ಜೂನ್ ತಿಂಗಳಲ್ಲಿ 60 ಲಕ್ಷ ಜನರಿಗೆ ಲಸಿಕೆ ಕೊಡಲಾಗಿತ್ತು. ಈ ತಿಂಗಳಲ್ಲೂ ಅಷ್ಟೇ ಪ್ರಮಾಣದ ಜನರಿಗೆ ವ್ಯಾಕ್ಸಿನ್ ಕೊಡಲಾಗುವುದು. ಇನ್ನೂ ಹೆಚ್ಚು ಪ್ರಮಾಣದಲ್ಲಿ ಲಸಿಕೀಕರಣ ಮಾಡಲು ಸರಕಾರ ಪ್ರಯತ್ನ ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಮೂರನೇ ಅಲೆ ಬಗ್ಗೆ ಆತಂಕ ಬೇಡ: ಮೂರನೇ ಅಲೆಯ ಬಗ್ಗೆ ಎಲ್ಲರಿಗೂ ಆತಂಕ ಇರುವುದು ನಿಜ. ಹಾಗಂತ ಹೆದರಬೇಕಿಲ್ಲ. ಈಗಾಗಲೇ ಕೇಂದ್ರದ ನೆರವಿನಿಂದ ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಆಕ್ಸಿಜನ್ ಉತ್ಪಾದನೆ ಮತ್ತು ಸಂಗ್ರಹ, ಐಸಿಯು ಬೆಡ್‍ಗಳ ಸಂಖ್ಯೆ ಹೆಚ್ಚಿಸುವುದು, ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದು ಸೇರಿ ಎಲ್ಲ ಅಗತ್ಯ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ಡಿಸಿಎಂ ತಿಳಿಸಿದರು.

ಇದರ ಜತೆಯಲ್ಲೇ ಲಸಿಕೀಕರಣವನ್ನೂ ಹೆಚ್ಚಿಸಲಾಗುತ್ತಿದೆ. ರಾಜ್ಯದಲ್ಲಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ಕೊಡಲಾಗುತ್ತಿದೆ. ಕೇಂದ್ರ ಸರಕಾರಕ್ಕೆ ಇನ್ನೂ ಹೆಚ್ಚಿನ ಲಸಿಕೆಗಾಗಿ ಮನವಿ ಸಲ್ಲಿಸಲಾಗಿದೆ. ಅಲ್ಲದೇ, ಲಸಿಕೆ ಕಂಪನಿಗಳಿಗೆ ಉತ್ಪಾದನೆ ಹೆಚ್ಚಿಸುವಂತೆ ಕೋರಲಾಗಿದೆ. ಜತೆಗೆ, ಲಭ್ಯವಾಗುತ್ತಿರುವ ಲಸಿಕೆಯನ್ನೂ ಕ್ಷಮತೆಯಿಂದ ಬಳಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಕಾಲೇಜು ಆರಂಭದ ಬಗ್ಗೆ ಇಂದು ಚರ್ಚೆ:
ರಾಜ್ಯದಲ್ಲಿ ಉನ್ನತ ಶಿಕ್ಷಣ ವಿಭಾಗದ ಕಾಲೇಜುಗಳನ್ನು ತೆರೆಯುವ ಬಗ್ಗೆ ಇಂದು ಸಂಜೆ ಸಭೆ ಬಳಿಕ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಾಗುವುದು.

ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸುವೆ. ಈಗಾಗಲೇ ಕಾಲೇಜುಗಳ ಆರಂಭಕ್ಕೆ ಸರಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದರು.

ಒಂದು ವೇಳೆ ಕಾಲೇಜುಗಳು ಶುರುವಾದರೆ, ಭೌತಿಕ ತರಗತಿಗಳಿಗೆ ಹಾಜರಾಗುವುದು ಆಯಾ ವಿದ್ಯಾರ್ಥಿಯ ಆಯ್ಕೆ. ಆನ್‍ಲೈನ್‍ನಲ್ಲಿಯೂ ಕಲಿಯಬಹುದು. ಆದರೆ ಹಾಜರಿ ಕಡ್ಡಾಯ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ