ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಿತ್ರದ ವಿರುದ್ಧ ಕಾಂಗ್ರೆಸ್ ಕಿಡಿ

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜೀವನ ಆಧಾರಿತ ಚಿತ್ರ ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಚಿತ್ರದಲ್ಲಿ ಡಾ. ಮನಮೋಹನ್ ಸಿಂಗ್ ಅವರನ್ನು ತಪ್ಪಾಗಿ ಬಿಂಬಿಸಲಾಗಿದ್ದು, ಕಾಂಗ್ರೆಸ್ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನುಪಮ್ ಖೇರ್ ಡಾ.ಮನಮೋಹನ್ ಸಿಂಗ್ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರ ಸಂಜಯ ಬರೂ ಅವರ ಪುಸ್ತಕವನ್ನು ಆಧರಿಸಿದೆ. ಬರೂ ಅವರು 2004-2008 ರ ಅವಧಿಯಲ್ಲಿ ಮನಮೋಹನ್ ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿದ್ದರು. ಈಗ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ಟ್ರೇಲರ್ ವೀಕ್ಷಿಸಿದ ಬಳಿಕ ಮಾತನಾಡಿರುವ ಮಹಾರಾಷ್ಟ್ರ ಯೂತ್ ಕಾಂಗ್ರೆಸ್ ಅಧ್ಯಕ್ಷ ಸತ್ಯಜಿತ್ ತಂಬೇ ಪಾಟೀಲ್, ಜನವರಿ 11ಕ್ಕೆ ಈ ಸಿನಿಮಾ ತೆರೆಕಾಣಲಿದ್ದು, ಅದಕ್ಕಿಂತ ಮುನ್ನ ಸಿನಿಮಾದ ವಿಶೇಷ ಪ್ರದರ್ಶನವನ್ನು ಆಯೋಜಿಸಬೇಕು ಎಂದು ಒತ್ತಾಯಿಸಿದ್ದಾರೆ. ಟ್ರೇಲರ್ ನೋಡಿ ಅನಿಸಿದ್ದು ಏನೆಂದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಗ್ಗೆ ತಪ್ಪಾಗಿ ಬಿಂಬಿಸಿದ್ದು, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತೆ ಚಿತ್ರಿಸಲಾಗಿದೆ. ಕಾಂಗ್ರೆಸ್‍ಗೆ ಅವಹೇಳನ ಮಾಡುವ ರೀತಿಯಲ್ಲಿ ಸತ್ಯಕ್ಕೆ ದೂರವಾದ ದೃಶ್ಯಗಳು ಇದರಲ್ಲಿವೆ. ಹಾಗಾಗಿ ಆ ದೃಶ್ಯಗಳಿಗೆ ಕತ್ತರಿ ಹಾಕಬೇಕು. ನಾವು ಆ ಸಿನಿಮಾವನ್ನು ನೋಡಿದ ನಂತರವೇ ಚಿತ್ರ ಬಿಡುಗಡೆ ಮಾಡಬೇಕು. ಒಂದು ವೇಳೆ ಇದಕ್ಕೆ ಒಪ್ಪದೇ ಇದ್ದರೆ ನಾವು ಸಿನಿಮಾ ಪ್ರದರ್ಶನವನ್ನು ಅಡ್ಡಿಪಡಿಸುತ್ತೇವೆ ಎಂದು ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ಈ ನಡುವೆ ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಸಿನಿಮಾದ ಟ್ರೇಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಿಜೆಪಿ, ಟ್ರೇಲರ್ ದೃಶ್ಯವನ್ನು ಟ್ವೀಟ್ ಮಾಡಿದೆ. ಕುಟುಂಬ ರಾಜಕಾರಣ 10 ವರ್ಷಗಳ ಭಾರತವನ್ನು ಯಾವ ರೀತಿ ಲೂಟಿ ಮಾಡಿದೆ ಎಂಬುದರ ಕಥೆ ಇಲ್ಲಿದೆ. ಮುಂದಿನ ಹಕ್ಕುದಾರ ಸಿದ್ಧರಾಗುವವರೆಗೆ ಡಾ. ಸಿಂಗ್ ಪ್ರಧಾನಿ ಕುರ್ಚಿಯಲ್ಲಿ ಕುಳಿತಿದ್ದರೆ? ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್‌ ನ ಅಧಿಕೃತ ಟ್ರೇಲರ್ ವೀಕ್ಷಿಸಿ. ಜನವರಿ 11ಕ್ಕೆ ಸಿನಿಮಾ ತೆರೆಗೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

The Accidental Prime Minister,Film,Congress,BJP

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ