ಕಲಬುರಗಿ: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಚಿಂತನೆ ನಡೆದಿಲ್ಲ. ಈ ಬಗ್ಗೆ ಚರ್ಚೆ ಕೂಡ ಆಗಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ನಗರದ ಎಂ.ಎಸ್.ಕೆ. ಮಿಲ್ ವಾಣಿಜ್ಯ ಬಡಾವಣೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಕಲಬುರಗಿ ನಗರಾಭಿವೃದ್ಧಿ ಪ್ರಾಕಾರದ ಅನುದಾನದಲ್ಲಿ ನಿರ್ಮಿಸಲಾಗುವ ಅತ್ಯಾಧುನಿಕ ತರಕಾರಿ ಮಾರುಕಟ್ಟೆ ಸಂಕೀರ್ಣಕ್ಕೆ ಶನಿವಾರ ಅಡಿಗಲ್ಲು ಹಾಕಿದ ಬಳಿಕ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರವಾದಾಗ ತಿಳಿಸುತ್ತೇವೆ. ಸದ್ಯಕ್ಕೆ ಅಂಥ ಯಾವ ಚಿಂತನೆ ಇಲ್ಲ. ಕೋವಿಡ್ ಮೂರನೇ ಅಲೆಯ ಭೀತಿ ಇರುವುದರಿಂದ ಅದನ್ನು ಎದುರಿಸುವತ್ತ ನಾವೀಗ ಗಮನಹರಿಸಬೇಕಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ನಾಲ್ವರು ಸಂಸದರಿಗೆ ಹೊಸದಾಗಿ ಕೇಂದ್ರದ ಸಂಪುಟದಲ್ಲಿ ಅವಕಾಶ ಸಿಕ್ಕಿರುವುದಕ್ಕೆ ಇದೇ ವೇಳೆ ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದರು.
ಕಚ್ಚಾಡುವುದನ್ನು ನಿಲ್ಲಿಸಿ:
ಸಂಸದೆ ಸುಮಲತಾ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಕ್ಸಮರದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ, ಈ ರೀತಿ ಕಚ್ಚಾಡುವ ಅವಶ್ಯಕತೆ ಇಲ್ಲ. ಎಲ್ಲರೂ ಸಹೋದರತೆಯಿಂದ ಬಾಳುವುದನ್ನು ಕಲಿಯಬೇಕು. ಮಂಡ್ಯದ ಅಭಿವೃದ್ಧಿ ಬಗ್ಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದರು. ಅಲ್ಲದೇ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದು ನನಗೆ ಅತಿ ಸಮಾಧಾನ ತಂದ ಸಂಗತಿ ಎಂದು ತಿಳಿಸಿದರು.
ರೈತರ ಆದಾಯ ದ್ವಿಗುಣಕ್ಕೆ ಆದ್ಯತೆ:
ಅನ್ನದಾತನ ಬದುಕು ಹಸನುಗೊಳಿಸಲು ಹತ್ತಾರು ಯೋಜನೆ ಜಾರಿಗೊಳಿಸಿದೆ. ರೈತರ ಆದಾಯ ದ್ವಿಗುಣಗೊಳಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಹೂವು ಬೆಳೆಗಾರರು ಹಾಗೂ ತರಕಾರಿ ಮಾರಾಟಗಾರರು ಸೂಕ್ತ ಮಾರುಕಟ್ಟೆ ಸಿಗದೆ ಕಷ್ಟ ಅನುಭವಿಸಿದ್ದರು. ಇದನ್ನರಿತ ಕೇಂದ್ರ ಸರ್ಕಾರ ಹೊರ ರಾಜ್ಯಗಳಿಗೆ ತರಕಾರಿ, ಹಣ್ಣು ಸಾಗಿಸಲು ಕಿಸಾನ್ ರೈಲು ಯೋಜನೆ ಜಾರಿಗೆ ತಂದಿದೆ. ಇದರಿಂದ ರೈತರಿಗೆ ತುಂಬಾ ಅನುಕೂಲವಾಗಿದೆ.
ಮುಂದಿನ ದಿನದಲ್ಲಿ ರೈತರ ಆದಾಯ ದ್ವಿಗುಣ ಮಾಡುವ ನಿಟ್ಟಿನಲ್ಲಿ ಮತ್ತಷ್ಟು ಹೊಸ ಯೋಜನೆಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದರು.